ಬೆಂಗಳೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅಸಮಾಧಾನ ಶಮನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು, ಸೋಮಶೇಖರ್ ಬೇಡಿಕೆಯಂತೆ ಯಶವಂತಪುರ ಮಂಡಲ ಮಾಜಿ ಅಧ್ಯಕ್ಣ ಸಿ.ಎಂ.ಮಾರೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಸಿ.ಎಂ.ಮಾರೇಗೌಡರನ್ನು ಬಿಜೆಪಿ 6 ವರ್ಷಗಳ ಕಾಲ ಹೊರಹಾಕಿದೆ.
ರಾಜ್ಯ ಶಿಸ್ತು ಸಮಿತಿಯ ಆದೇಶದಂತೆ ನೀವು 2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ, ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಇದರಿಂದ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಪರಿಗಣಿಸಿ, ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾರಾಯಣ್ ಆದೇಶ ಹೊರಡಿಸಿದ್ದಾರೆ.
ವಿವಾದದ ಕೇಂದ್ರ ಬಿಂದುವಾಗಿದ್ದ ಮಾರೇಗೌಡ ವಿರುದ್ಧ ಕಡೆಗೂ ಬಿಜೆಪಿ ಕ್ರಮ ಕೈಗೊಂಡಿದೆ. ಒಕ್ಕಲಿಗರ ಸಂಘದ ನಿರ್ದೇಶಕ, ಖಜಾಂಚಿ ಮಾರೇಗೌಡ ವಿರುದ್ಧ ಎಸ್‌ಟಿ ಸೋಮಶೇಖರ್ ಸಿಡಿದೆದ್ದು, ಕ್ರಮಕ್ಕೆ ಆಗ್ರಹಿಸಿದ್ದರು. 2016ರಿಂದ ಒಂದು ಅವಧಿಗೆ ಯಶವಂತಪುರ ಬಿಜೆಪಿ ಅಧ್ಯಕ್ಷರಾಗಿದ್ದ ಮಾರೇಗೌಡರ ವಿರುದ್ಧ ಸೋಮಶೇಖರ್ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡಿದ್ದರು. ಚುನಾವಣೆ ಮೊದಲಿಂದಲೇ ಇದ್ದ ವೈಮನಸ್ಸು ಚುನಾವಣೆಯ ವೇಳೆ ಹೆಚ್ಚಾಗಿತ್ತು.