ಬೆಂಗಳೂರು: ಮುಂಬರುವ ಉಪಚುನಾವಣೆಗಳಲ್ಲಿ ನಿಮ್ಮನ್ನು ಸೋಲಿಸುತ್ತೇವೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನ ಗಳಿಸಿ ನಿಮ್ಮನ್ನು (ಕಾಂಗ್ರೆಸ್) ಶಾಶ್ವತವಾಗಿ ವಿರೋಧ ಪಕ್ಷವಾಗಿ ಕೂರಿಸಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಗುಡುಗಿದರೆ, ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ. ನಿಮ್ಮನ್ನು ಸೋಲಿಸಿ ತೋರಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದಾಗ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಈ ಸವಾಲು ಹಾಕಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಅಭಿವೃದ್ಧಿಯ ಕುರಿತು ಮಾತನಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಅವರು ರಾಜಕೀಯವಾಗಿ ನಮ್ಮನ್ನು ದೂಷಿಸಿದ್ದಾರೆ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದು ಬಿಜೆಪಿ. ಆದರೆ, ಎಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೋ ಎಂದು ಹೆದರಿದ ಕಾಂಗ್ರೆಸ್ ಪಕ್ಷ, ಜೆಡಿಎಸ್ ಜತೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸಿತು. ಆದರೆ, ಕುಮಾರಸ್ವಾಮಿ ಅವರಿಗೆ ಕೆಲಸ ಮಾಡಲು ಬಿಡdE ಹಿಂಸೆ ನೀಡಿದ ಬಗ್ಗೆ ನಾನು ಹೇಳಬೇಕಿಲ್ಲ. ಸ್ವತಃ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ನನ್ನನ್ನು ಕಾಂಗ್ರೆಸ್ ಪಕ್ಷ ಕ್ಲರ್ಕ್ ರೀತಿ ನೋಡಿಕೊಂಡಿದೆ. ಹೀಗಾಗಿ ನಾನು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಹೆಚ್ಡಿಕೆ ಹೇಳಿದ್ದರು ಎಂದರು.
ಇವತ್ತು ನಿಮ್ಮ ಪಕ್ಷದ ನಾಯಕತ್ವದ ಬಗ್ಗೆ ಜನರಿಗೆ ಅನುಮಾನ ಇದೆ. ನಿಮ್ಮ ಪರಿಸ್ಥಿತಿ ಹೇಗಿದೆ ಎಂದರೆ ಇವತ್ತೇ ನಿಮಗೆ ಸವಾಲು ಹಾಕುತ್ತೇನೆ. ರಾಜ್ಯದಲ್ಲಿ ಮುಂದೆ ಎದುರಾಗಲಿರುವ ಮೂರು ವಿಧಾನಸಭೆ, ಒಂದು ಲೋಕಸಭೆ ಕ್ಷೇತ್ರದ ಉಪಚುನಾವಣೆಗಳಲ್ಲಿ ನಿಮ್ಮನ್ನು ಸೋಲಿಸಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ. ಇದರಲ್ಲಿ ಯಾವ ಅನುಮಾನವೂ ಬೇಡ ಎಂದರು.