ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನ ಎದುರಾಗಿರುವ ಸಂದರ್ಭದಲ್ಲಿ ಬಿಜೆಪಿ ನಮ್ಮ ವಿರುದ್ಧ ಷಡ್ಯಂತ್ರ ನಡೆಸಿದ್ದು, ಡಿ.ಕೆ.ಶಿವಕುಮಾರ್ ಅವರು ವಿರುದ್ಧ ನಾನು ಹೈಕಮಾಂಡ್ಗೆ ಪತ್ರ ಬರೆದಿದ್ದೇನೆ ಎಂದು ನಕಲಿ ಪತ್ರ ವೈರಲ್ ಮಾಡಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ವಿರುದ್ಧ ಅಸಮಧಾನ ಎಂಬ ಅರ್ಥ ಬರುವ ರೀತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ದೂರು ಕೊಟ್ಟಿದ್ದಾರೆ ಎಂಬ ಒಕ್ಕಣೆಯ ಪತ್ರ ವೈರಲ್ ಆಗಿದ್ದು, ದೂರಿನ ಪತ್ರ ವೈರಲ್ ಆದ ಬೆನ್ನಲ್ಲೆ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಟ್ವೀಟ್ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಸೋಲಿನ ಭೀತಿಯಿಂದ ಹತಾಶೆಗೀಡಾಗಿರುವ ಬಿಜೆಪಿ ಈ ರೀತಿ ಮಾಡುತ್ತಿದೆ. ನನ್ನ ಹೆಸರಿನ ಖೊಟ್ಟಿ ಪತ್ರವನ್ನು ರಚಿಸಿ ಅಪಪ್ರಚಾರ ಮಾಡುತ್ತಿದೆ. ಇಂತಹ ಯಾವ ಪತ್ರವನ್ನು ನಾನು ಬರೆದಿಲ್ಲ ಎಂದಿದ್ದಾರೆ.
ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು. ನನ್ನ ಮತ್ತು ಡಿ.ಕೆ.ಶಿವಕುಮಾರ್ ಸಂಬಂಧ ಸೌಹಾರ್ದಯುತವಾಗಿದೆ. ಇದಕ್ಕೆ ಹುಳಿ ಹಿಂಡುವ ಪ್ರಯತ್ನ ಯಶಸ್ಸು ಕಾಣಲಾರದು. ಶೀಘ್ರದಲ್ಲಿಯೇ ಪೊಲೀಸರಿಗೆ ದೂರು ನೀಡಿ. ಈ ಕಿಡಿಗೇಡಿತನದ ಪತ್ರ ಸೃಷ್ಟಿಸಿ ಹಂಚುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿರುವ ವಿವರ:'ಕಳೆದ ಒಂದು ವರ್ಷದಿಂದ ರಾಹುಲ್ ಗಾಂಧಿಯವರ ತಂಡದ ಮಾರ್ಗದರ್ಶನದಂತೆ ಉತ್ತಮವಾಗಿ ಕ್ಯಾಂಪೈನ್ ಮಾಡಿಕೊಂಡು ಬಂದಿದ್ದೆವು. ಡಿ ಕೆ ಶಿವಕುಮಾರ್ ಅವರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಜನರ ಮುಂದೆ ಘೋಷಣೆ ಕೂಗಿಸಿಕೊಳ್ಳುತ್ತಾ ನನ್ನ ಅಪಾರ ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿದ್ದಾರೆ. ಎಲ್ಲ ನಿರ್ಣಯವನ್ನು ಏಕಮುಖವಾಗಿ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದಾಗಿ ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿದ್ದೆ. ಆದರೆ ಕೋಲಾರ ಟಿಕೆಟ್ ತಪ್ಪಿಸುವಲ್ಲಿ ಡಿಕೆ ಶಿವಕುಮಾರ್ ಅವರು ಯಶಸ್ವಿಯಾಗಿದ್ದಾರೆ. ಆದರೂ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದ ನನ್ನ ಆಸೆಗೆ ಎಳ್ಳುನೀರು ಬಿಟ್ಟಿರುತ್ತಾರೆ' ಎಂದು ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿವರಿಸಿದ್ದು ಪತ್ರದಲ್ಲಿದೆ. ಇದು ನಕಲಿ ಎಂದು ಈಗ ಸಿದ್ದರಾಮಯ್ಯ ವಿವರಿಸಿದ್ದಾರೆ.