ಕರ್ನಾಟಕ

karnataka

ETV Bharat / state

ಮತ್ತೆ ದೇಣಿಗೆಯತ್ತ ಮುಖ ಮಾಡಿದ ಸರ್ಕಾರ: ಕಳೆದ ಬಾರಿ ಸಂಗ್ರಹಿಸಿದ ಸಿಎಂ ಕೋವಿಡ್ ಪರಿಹಾರ ನಿಧಿಯ ಸ್ಥಿತಿಗತಿ ಹೇಗಿದೆ? - CM covid Relief Fund

ಕೋವಿಡ್ ಎರಡನೇ ಅಲೆ ದಿನೇ‌ ದಿನೆ ರಾಜ್ಯಾದ್ಯಂತ ಉಲ್ಬಣಿಸುತ್ತಿದೆ. ಎರಡನೇ ಅಲೆಯ ಅಬ್ಬರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದಕ್ಕಾಗಿನೇ ರಾಜ್ಯಾದ್ಯಂತ ಎರಡು ವಾರಗಳ ಲಾಕ್‌ಡೌನ್ ಎಂಬ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಲಾಕ್‌ಡೌನ್ ಹೇರಿಕೆಯಿಂದ ಈಗಾಗಲೇ ಸೊರಗಿದ್ದ ಬೊಕ್ಕಸ ಮತ್ತಷ್ಟು ಬರಿದಾಗುವುದು ಖಚಿತ. ಇತ್ತ ಸರ್ಕಾರಕ್ಕೆ ಬಹುತೇಕ ಸಂಪನ್ಮೂಲವನ್ನು ಕೋವಿಡ್ ನಿರ್ವಹಣೆಗೆ ವಿನಿಯೋಗಿಸುವ ಅನಿವಾರ್ಯತೆ ಇದೆ. ಸೀಮಿತ ಆದಾಯದ ಏಟಿನಿಂದ ಬಸವಳಿಯುತ್ತಿರುವ ಸರ್ಕಾರ ಇದೀಗ ಮತ್ತೆ ಸಾರ್ವಜನಿಕರ ದೇಣಿಗೆಯತ್ತ ಮುಖ ಮಾಡುವ ಅನಿವಾರ್ಯತೆ ಎದುರಾಗಿದೆ.

What is the status of the CM covid Relief Fund collected last time?
ಕಳೆದ ಬಾರಿ ಸಂಗ್ರಹಿಸಿದ ಸಿಎಂ ಕೋವಿಡ್ ಪರಿಹಾರ ನಿಧಿಯ ಸ್ಥಿತಿಗತಿ ಹೇಗಿದೆ?

By

Published : Apr 29, 2021, 7:02 PM IST

ಬೆಂಗಳೂರು: ಕೊರೊನಾ ಎರಡ‌ನೇ ಅಲೆಗೆ ರಾಜ್ಯ ತತ್ತರಿಸಿ ಹೋಗಿದೆ. ಈಗಾಗಲೇ ಕರ್ಪ್ಯೂ ಹೇರಿರುವುದರಿಂದ ಆದಾಯದ ಮೂಲವೇ ಬರಿದಾಗಿರುವ ಸರ್ಕಾರಕ್ಕೆ ಕೋವಿಡ್ ನಿರ್ವಹಣೆ ದೊಡ್ಡ ಸವಾಲಾಗಿದೆ. ಇದೀಗ ಮತ್ತೆ ಸಹಾಯ ಹಸ್ತಗಳತ್ತ ಮುಖ ಮಾಡುವ ಅನಿವಾರ್ಯತೆಗೊಳಗಾಗಿರುವ ಸರ್ಕಾರ ಕಳೆದ ಬಾರಿ ಸಂಗ್ರಹಿತ ಕೋವಿಡ್ ಸಿಎಂ ಪರಿಹಾರ ನಿಧಿಯನ್ನು ಯಾವ ರೀತಿ ಬಳಕೆ ಮಾಡಿದೆ ಎಂಬ ವರದಿ ಇಲ್ಲಿದೆ.

ಸಂಗ್ರಹವಾದ ಕೋವಿಡ್ ಪರಿಹಾರ ದೇಣಿಗೆ ಎಷ್ಟು?

ಸಿಎಂ ಕಳೆದ ಬಾರಿ ಉದಾರ ಮನಸ್ಸಿನಿಂದ ದೇಣಿಗೆ ನೀಡುವಂತೆ ಕರೆ ನೀಡಿದ್ದರು. ಅದರಂತೆ ಹಲವರು ತಮ್ಮ ಕೈಲಾಗುವಷ್ಟರ ಮಟ್ಟಿಗೆ ದೇಣಿಗೆ ನೀಡಿದ್ದರು. ಅದರಂತೆ ಮಾರ್ಚ್ ವೇಳೆಗೆ ಸಿಎಂ ಕೋವಿಡ್ ಪರಿಹಾರ ನಿಧಿಗೆ ಬರೋಬ್ಬರಿ 312,24,77,410 ದೇಣಿಗೆ ಹರಿದು ಬಂದಿತ್ತು. ಇದು ಸೊರಗಿದ್ದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ರಿಲೀಫ್ ನೀಡಿತ್ತು. ಈ ದೇಣಿಗೆ ಹಣವನ್ನು ಕೋವಿಡ್ನ​ ವಿವಿಧ ನಿರ್ವಹಣಾ ವೆಚ್ಚಕ್ಕೆ ವಿನಿಯೋಗಿಸುವುದಾಗಿ ತಿಳಿಸಿತ್ತು. ಅದರಂತೆ ಸಿಎಂ ಪರಿಹಾರ ನಿಧಿಯಿಂದ ವಿವಿಧ ಇಲಾಖೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

309.91 ಕೋಟಿ ರೂ. ಹಣ ಬಿಡುಗಡೆ

ಸಿಎಂ ಕೋವಿಡ್ 19 ಪರಿಹಾರ ನಿಧಿಗೆ ಬರೋಬ್ಬರಿ 312.24 ಕೋಟಿ ರೂ. ಹರಿದು ಬಂದಿತ್ತು. ಈ ಪೈಕಿ ಸರ್ಕಾರ ಮಾರ್ಚ್ ಅಂತ್ಯದ ವೇಳೆಗೆ ಸುಮಾರು 309.91 ಕೋಟಿ ರೂ. ಹಣವನ್ನು ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿದೆ. ನಿಧಿಯಿಂದ ಕಂದಾಯ ಇಲಾಖೆಗೆ ಈವರೆಗೆ 14.86 ಕೋಟಿ ರೂ. ಬಿಡುಗಡೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 209.65 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ 85.39 ಕೋಟಿ ರೂ. ಬಿಡುಗಡೆ ಮಾಡಿದೆ. ಈ ದೇಣಿಗೆ ನಿಧಿಯಿಂದ ಕಳೆದ ಒಂದು ವರ್ಷದಲ್ಲಿ ಯಾವುದೇ ಫಲಾನುಭವಿಗಳಿಗೆ ನೇರವಾಗಿ ಪರಿಹಾರದ ಮೊತ್ತವನ್ನು ಒದಗಿಸಿಲ್ಲ. ಸದ್ಯಕ್ಕೆ ಸಿಎಂ ಕೋವಿಡ್ ಪರಿಹಾರ ನಿಧಿಯಲ್ಲಿ ಉಳಿದಿರುವುದು ಕೇವಲ 2.33 ಕೋಟಿ ರೂ. ಮಾತ್ರ. ಪರಿಹಾರ ನಿಧಿಯಿಂದ ಪಡೆದ ಅನುದಾನದಲ್ಲಿ ಇಲಾಖೆಗಳು ಕೋವಿಡ್ ನಿರ್ವಹಣೆಯ ಯಾವ ಯಾವ ವೆಚ್ಚಗಳಿಗೆ ಹಣವನ್ನು ವಿನಿಯೋಗಿಸಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಮತ್ತೆ ದೇಣಿಗೆಯತ್ತ ಮುಖ ಮಾಡುವ ಅನಿವಾರ್ಯ

ಎರಡನೇ ಅಲೆ ಮೊದಲಿಗಿಂತಲೂ ಭೀಕರವಾಗಿದ್ದು, ಸರ್ಕಾರಕ್ಕೆ ಬಾರಿ ಪ್ರಮಾಣದ ಸಂಪನ್ಮೂಲದ ಅಗತ್ಯತೆ ಎದುರಾಗಿದೆ. ಖಾಲಿಯಾಗಿರುವ ಬೊಕ್ಕಸದ ಹಿನ್ನೆಲೆ ಸರ್ಕಾರ ಮತ್ತೆ ಸಾರ್ವಜನಿಕ ದೇಣಿಗೆಯತ್ತ ಮುಖ ಮಾಡುತ್ತಿದೆ. ಆದರೆ, ಈ ಬಾರಿ ಸಾರ್ವಜನಿಕ ವಲಯ ಹಾಗೂ ಕಾರ್ಪೊರೇಟ್ ವಲಯದಿಂದ ಹೆಚ್ಚಿನ ಸಹಾಯಹಸ್ತ ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ವರ್ಷದ ಲಾಕ್‌ಡೌನ್ ಹಾಗೂ ಈ ಬಾರಿಯ ಕರ್ಪ್ಯೂನಿಂದ ಬಹುತೇಕರ ಆದಾಯ ಮೂಲ ಸೊರಗಿರುವ ಕಾರಣ ಉದಾರವಾಗಿ ದೇಣಿಗೆ ನೀಡುವ ಪರಿಸ್ಥಿತಿಯಲ್ಲಿ ಇಲ್ಲ.

ABOUT THE AUTHOR

...view details