ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಜುಲೈ 1 ರಂದು " ಪತ್ರಿಕಾ ದಿನಾಚರಣೆ" ಆಚರಿಸಲಾಗುತ್ತದೆ. 1843ರ ಜುಲೈ 1 ರಂದು ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರ ಬಂತು. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು, ದೃಶ್ಯ ಮಾಧ್ಯಮ ಮೊದಲಾದವುಗಳ ಕುರಿತು ಚರ್ಚೆ, ಅವಲೋಕನ ನಡೆಯುತ್ತಿವೆ. ಪತ್ರಿಕೋದ್ಯಮದ ಪರಿಚಯ ಜನ ಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಇಂದು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ.
ಕೆಲವು ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪ್ರಸ್ತುತ ಪತ್ರಿಕೋದ್ಯಮ ಎಂಬುವುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿವೆ. ಇನ್ನು ಸಾಮಾಜಿಕ ತಾಣಗಳು ಕೂಡ ಅತಿವೇಗದಲ್ಲಿ ಸುದ್ದಿಗಳನ್ನು ಮುಟ್ಟಿಸುತ್ತಿವೆ.
ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ತಾಂತ್ರಿಕವಾಗಿ ಬೆಳೆದು ನಿಂತಿದೆ. ಇಂದು ಸುದ್ದಿ ತಿಳಿಯಬೇಕೆಂದರೆ ಬಹುಪಾಲು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತಿನ ಯಾವ ಭಾಗದ ವಿಷಯವನ್ನು ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದಾಗಿದೆ.
ತಂತ್ರಜ್ಞಾನದ ಬೆಳವಣಿಗೆ ಸುದ್ದಿ ಮಾಧ್ಯಮದ ಮೇಲೆ ಬದಲಾವಣೆಯ ಗಾಳಿ ಬೀಸಿದೆ. ಆದರೂ, ಪತ್ರಿಕೆಗಳನ್ನು ಓದುವ ಹವ್ಯಾಸ ಈಗಲೂ ಇದೆ. ಮನುಷ್ಯನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ತರ ಪಾತ್ರ ವಹಿಸಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ ಹಾಗೂ ಪರಿಚಯಿಸಿಕೊಟ್ಟಿದೆ.
ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು. ಸುದ್ದಿ ಮಾಧ್ಯಮ ಯಾವುದೇ ಇದ್ದರೂ, ಅದು ಪತ್ರಿಕೆಯನ್ನು ಮೀರಿಸಲಾಗುವುದಿಲ್ಲ. ಮುದ್ರಿತ ಸುದ್ದಿಯನ್ನು ಅನೇಕ ಸಲ ವಿವರವಾಗಿ ಓದಬಹುದು. ಡಿಜಿಟಲ್ ಇಲ್ಲವೇ ಟಿವಿ ಮಾಧ್ಯಮಗಳಲ್ಲಿ ಅದು ಸಾಧ್ಯವಿಲ್ಲ. ಎಲ್ಲ ಪ್ರಮುಖ ಪಟ್ಟಣಗಲ್ಲಿ ಕನಿಷ್ಠ ಒಂದಾದರೂ ಪತ್ರಿಕೆ ಇರಬೇಕೆಂದು ಮುಂದುವರಿದ ದೇಶಗಳಲ್ಲಿ ಬಯಸುತ್ತಾರೆ.
ವಿಶ್ವಾಸಾರ್ಹ ಮಾಧ್ಯಮ ಯಾವುದು?
ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹತೆ ಹೊಂದಿರುತ್ತವೆ. ನಮ್ಮ ದೇಶದ ಸುದ್ದಿ ಬಳಕೆದಾರರಲ್ಲಿ ನಡೆದ ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಮುದ್ರಣ ಮಾಧ್ಯಮವು ಅತ್ಯಂತ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿರುವ ಮಾಧ್ಯಮ ಎಂದು ಸಾಬೀತಾಗಿದೆ.
ಪತ್ರಿಕೆಗಳು ಅತಿ ಹೆಚ್ಚಿನ ವಿಶ್ವಾಸಾರ್ಹ ಮಾಧ್ಯಮವೆಂದು ಮೊದಲ ಆದ್ಯತೆ ನೀಡಿದ್ದಾರೆ. ಅದಕ್ಕೆ ಶೇ.62ರಷ್ಟು ಅಂಕಗಳು ನೀಡಲಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಬಾನುಲಿ (ಶೇ.56), ಮೂರನೇ ಸ್ಥಾನದಲ್ಲಿ ಟಿವಿ (ಶೇ.53) ಹಾಗೂ ಕಡೆಯ ಸ್ಥಾನವನ್ನು ಸಾಮಾಜಿಕ ಮಾಧ್ಯಮಗಳು (ಶೇ.27) ಪಡೆದಿವೆ.
ರೇಡಿಯೊ ಮತ್ತು ಟೆಲಿವಿಷನ್ ತಂತ್ರಜ್ಞಾನವನ್ನು 20ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಇಂಟರ್ನೆಟ್ ಪ್ರವೇಶಕ್ಕೆ ಸಂಬಂಧಿಸಿದ ಡಿಜಿಟಲ್ ಯುಗದ ಹೊಸ ತಂತ್ರಜ್ಞಾನಗಳನ್ನು ಸಹ ಸೇರಿಸಲಾಗುತ್ತಿದೆ. ಕಾಲ ಕ್ರಮೇಣ ಈ ಸಮೂಹ ಮಾಧ್ಯಮಗಳು ರಾಜಕೀಯ, ಸಂಸ್ಕೃತಿ ಮತ್ತು ಆರ್ಥಿಕತೆಯಂತಹ ವಿವಿಧ ಹಂತಗಳಲ್ಲಿ ಹೆಚ್ಚಿನ ಪ್ರಸ್ತುತತೆಯನ್ನು ಗಳಿಸಿವೆ, ಏಕೆಂದರೆ ದೊಡ್ಡ ಜನಸಂಖ್ಯೆಗೆ ಸಂದೇಶಗಳನ್ನು ರವಾನಿಸುವ ಸಾಧ್ಯತೆಯಿದೆ.
ಉದಾಹರಣೆಗೆ ಹೇಳುವುದಾದರೆ, ಜಾಹೀರಾತುಗಳ ಮೂಲಕ ಉತ್ಪನ್ನಗಳನ್ನು ಉತ್ತೇಜಿಸಲು ದೂರದರ್ಶನವು ಉತ್ತಮ ಸಂವಹನ ಮಾಧ್ಯಮವಾಗಿದೆ. ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯ ಜನರು ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ತಿಳಿದುಕೊಳ್ಳಬಹುದು, ಆಕರ್ಷಿತರಾಗಬಹುದು ಮತ್ತು ನಂತರ ಅದನ್ನು ಖರೀದಿಸಲು ಪ್ರೋತ್ಸಾಹಿಸಬಹುದು.