ಬೆಂಗಳೂರು:ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಬಿಬಿಎಂಪಿ ಮೇಯರ್ ಚುನಾವಣೆ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಕೇಂದ್ರದಿಂದ ನೆರೆ ಅಧ್ಯಯನ ತಂಡ ಬಂದು ವೀಕ್ಷಣೆ ಮಾಡಿಕೊಂಡು ಹೋಗಿದೆ. ಅಲ್ಲದೆ ಆ ತಂಡಕ್ಕೆ ರಾಜ್ಯ ಸರ್ಕಾರವು ಅಗತ್ಯ ಮಾಹಿತಿ ನೀಡಿದೆ. ಇನ್ನು, ಕೆಲವೇ ದಿನಗಳಲ್ಲಿ ಕೇಂದ್ರದಿಂದ ಪರಿಹಾರದ ಹಣ ಬರಲಿದೆ. ಅಲ್ಲದೆ ಕೇಂದ್ರದ ಪರಿಹಾರವನ್ನು ಕಾಯದೆ ರಾಜ್ಯಸರ್ಕಾರ ಉತ್ತರ ಕರ್ನಾಟಕದ ನೆರೆ ಪ್ರದೇಶಗಳ ರಸ್ತೆ, ಸೇತುವೆಗಳ ಪುನರ್ ನಿರ್ಮಾಣ ಕಾರ್ಯಕ್ಕೆ,1500 ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.
ನೆರೆ ಪ್ರದೇಶಗಳಲ್ಲಿ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಕೇಂದ್ರದಿಂದಲೂ ಪರಿಹಾರ ಸಿಗಲಿದ್ದು ಶೀಘ್ರದಲ್ಲೇ ನೆರೆ ಸಂತ್ರಸ್ತರಿಗೆ ನೆರವನ್ನು ತ್ವರಿತಗತಿಯಲ್ಲಿ ನೀಡಲಾಗುವುದು. ಇನ್ನು, ಕೇಂದ್ರ ಸರ್ಕಾರ ನೆರವು ನೀಡಿಲ್ಲ ಎಂಬ ತಿರುಳಿಲ್ಲದ ಆಪಾದನೆ ಮಾಡೋದರಲ್ಲೇ ಹಲವರು ಸಕ್ರಿಯರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಹಾವಳಿ ಪ್ರದೇಶಗಳಿಗೆ ನಮ್ಮ ಗೃಹ ಮಂತ್ರಿಗಳು, ಹಣಕಾಸು ಮಂತ್ರಿಗಳು ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ ಎಂದರು.
ನೆರೆ ಸಂತ್ರಸ್ತರಿಗೆ ನೆರವು ನೀಡುವ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಒಂದು, ಬೇರೆ ರಾಜ್ಯಕ್ಕೆ ಒಂದು ಮಾಡಿಲ್ಲ. ಇಡೀ ದೇಶಕ್ಕೆ ನಾಯಕರಾಗಿರುವ ಪ್ರಧಾನಿ ಮೋದಿ ಬಗ್ಗೆ ಇಂತಹ ತಿರುಳಿಲ್ಲದ ಆಪಾದನೇ ಮಾಡುವುದು ಸರಿಯಲ್ಲ ಎಂದರು.ಇದೇ ವೇಳೆ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಿ ಕೇಂದ್ರ ನೆರವು ನೀಡ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ವಿರೋಧ ಪಕ್ಷದವರನ್ನು ಟಾರ್ಗೆಟ್ ಮಾಡಿರಬೇಕು. ಆದರೆ, ನಮ್ಮ ಪಕ್ಷದಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನಮ್ಮ ಪಕ್ಷ ಸಂಪೂರ್ಣವಾಗಿ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದೆ. ಹಾಗಾಗಿ ಇಂತ ಪ್ರಶ್ನೆಗಳು ಉದ್ಭವವಾಗುವುದಕ್ಕೆ ಸಾಧ್ಯವಿಲ್ಲ ಎಂದರು.