ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ತಜ್ಞರ ಜೊತೆ ಸೋಮವಾರ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಗೃಹ ಕಚೇರಿ ಕೃಷ್ಣಾ ಬಳಿ ಮಾತನಾಡಿದ ಸಚಿವರು, ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವೇಳೆ ಒಂದು ಡೆಸ್ಕ್ನಲ್ಲಿ, ಒಂದು ಕೊಠಡಿಯಲ್ಲಿ ಎಷ್ಟು ಮಕ್ಕಳನ್ನು ಕೂರಿಸಬೇಕು. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದರೆ ಅವರನ್ನು ಬೇರೆ ಕಡೆ ಕೂರಿಸುವ ವ್ಯವಸ್ಥೆ ಮಾಡುತ್ತೇವೆ. ಅವರ ತಪಾಸಣೆ, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬಹುದು, ಎಷ್ಟು ಶೈಕ್ಷಣಿಕ ದಿನಗಳು ಕಡಿಮೆ ಆಗುತ್ತವೆ ಎಂಬುದರ ಕುರಿತಂತೆ ಶಿಕ್ಷಣ ಇಲಾಖೆ ಅಧ್ಯಯನ ಮಾಡುತ್ತಿದೆ. ತರಗತಿಗಳನ್ನು ಶಿಫ್ಟ್ನಲ್ಲಿ ನಡೆಸಬೇಕಾ ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕಾ ಎಂಬ ಚರ್ಚೆ ನಡೆಯುತ್ತಿದೆ. ಸೋಮವಾರ ವೇಳೆಗೆ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಅಷ್ಟರಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಕೂಡಾ ಬಂದಿರುತ್ತದೆ ಎಂದರು.
ಪರೀಕ್ಷೆ ನಡೆಸುವ ವೇಳೆ ಮಕ್ಕಳ ಹಿತ ಕೂಡಾ ಕಾಪಾಡಬೇಕಾಗುತ್ತದೆ. ಮಕ್ಕಳಿಗೆ ತಮ್ಮ ಮನೆ ಪಕ್ಕದಲ್ಲೇ ಇರುವ ಪರೀಕ್ಷಾ ಕೇಂದ್ರದ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸೋಮವಾರ ಚರ್ಚೆ ಮಾಡಿ ಪರೀಕ್ಷಾ ವೇಳಾಪಟ್ಟಿ ಕೊಡುವ ಸಾಧ್ಯತೆ ಇದೆ. ಎಲ್ಕೆಜಿ, ಯುಕೆಜಿ, ಪ್ರಾಥಮಿಕ ಶಾಲೆಗಳನ್ನು ಯಾವಾಗ ಆರಂಭ ಮಾಡಬೇಕು. ಈ ಹಿಂದೆ ಇದ್ದ ರೀತಿ ಜೂನ್ 1ಕ್ಕೆ ಶಾಲೆ ಪುನಾರಂಭ ಸಾಧ್ಯತೆ ಕಡಿಮೆ. ಈ ವರ್ಷ ಯಾವುದೇ ಶಾಲೆಗಳು ಶುಲ್ಕದಲ್ಲಿ ಹೆಚ್ಚಳ ಮಾಡದಂತೆ ಸೂಚಿಸಿದ್ದೇವೆ. ಸಾಧ್ಯವಾದರೆ ಕಡಿಮೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.
ಇನ್ನು ಎಲ್ಕೆಜಿ, ಯುಕೆಜಿ ಮಕ್ಕಳಿಗೂ ಆನ್ಲೈನ್ ತರಗತಿ ನಡೆಸುವುದು ಸರಿಯಲ್ಲ. ಇದು ಹಾಸ್ಯಾಸ್ಪದ ಸಂಗತಿ. ಈ ಮಕ್ಕಳಿಗೆ ಆನ್ಲೈನ್ ಟೀಚಿಂಗ್ ಕ್ರೂರ ವ್ಯವಸ್ಥೆ, ಹಿಂಸೆ. ಇದರ ಬಗ್ಗೆ ಅಧ್ಯಯನ ಮಾಡುವಂತೆ ಇಲಾಖೆ ಆಯುಕ್ತರಿಗೆ ಸೂಚಿಸಿದ್ದೇನೆ. ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸದ್ಯ ಸರ್ಕಾರದಿಂದ ಎಸ್ಎಸ್ಎಲ್ಸಿ ಮಕ್ಕಳಿಗೆ ದೂರದರ್ಶನ, ಆನ್ಲೈನ್ ಮೂಲಕ ಪುನರ್ಮನನ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ. ಈ ಪುನರ್ಮನನ ಕಾರ್ಯಕ್ರಮ ಜೂನ್ ಮೊದಲ ವಾರದಲ್ಲಿ ಮುಗಿಯುತ್ತದೆ. ಈ ಕಾರ್ಯಕ್ರಮ ಮುಗಿದ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಚಿಂತನೆ ಇದೆ ಎಂದರು.