ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಕೇವಲ ಚರ್ಚೆಗೆ ಮೀಸಲಾಗಿದ್ದು, ಬ್ಯಾಡ್ ಬೆಂಗಳೂರು ಆಗಿದೆ. ಶಾಸಕರಿಗೆ ಅನುದಾನ ನೀಡದೇ ಸಂಪೂರ್ಣವಾಗಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದನ್ನು ಬಯಲಿಗೆಳೆಯಲು ನಮ್ಮ ನಾಯಕರಾದ ಯಡಿಯೂರಪ್ಪ ಸಿದ್ದರಾಗಿದ್ದಾರೆ. ಅದಕ್ಕಾಗಿ ನವೆಂಬರ್ 2ರಂದು ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಲಿದ್ದು 3ರಂದು ಬೆಂಗಳೂರಿನಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 17 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ ನಾಯಕರ ನೇಮಕ ಆಗಿದೆ.17 ಬಿಜೆಪಿ ತಂಡಗಳು ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ ಎಂದು ಹೇಳಿದರು.
ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಸರ್ಕಾರ ವಿಫಲ:ಬೆಂಗಳೂರು ನಗರಕ್ಕೆ ಸಂಬಂಧಿಸಿದ ಸಮಸ್ಯೆ ಇದೆ. ಈ ಸಮಸ್ಯೆಗಳ ಪರಿಹಾರ ಸಂಬಂಧ ಹೋರಾಟ ಕೈಗೆತ್ತಿಕೊಳ್ಳುವ ವಿಚಾರದಲ್ಲಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಶಾಸಕರು ಭಾಗಿಯಾಗಿದ್ದೇವೆ.ಸರ್ಕಾರದ ನ್ಯೂನತೆ ಏನಿದೆ ಎಂದು ಚರ್ಚಿಸಿದ್ದೇವೆ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಹೇಗೆ ವಿಫಲವಾಗಿದೆ. ರಸ್ತೆ ರಸ್ತೆಗಳಲ್ಲಿ ಪಾಟ್ ಹೋಲ್, ಕಸ ವಿಲೇವಾರಿ ಆಗುತ್ತಿಲ್ಲ, ಪಾರ್ಕ್, ಕೆರೆ ನಿರ್ವಹಣೆ ಆಗ್ತಿಲ್ಲ. ಕೊಟ್ಟಿರೋ ಕಾಮಗಾರಿ, ಟೆಂಡರ್ ನಿಂತಿದೆ.ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಹಿಡಿದು ಬಿಜೆಪಿ ಶಾಸಕರಿರೋ ಕ್ಷೇತ್ರದಲ್ಲಿ ಕೊಟ್ಟಿರೋ ಹಣವನ್ನು ವಾಪಸ್ ಪಡೆದು ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಕ್ಕೆ ಹಣ ಕೊಡಲಾಗಿರುವ ಕುರಿತಾಗಿ ಚರ್ಚಿಸಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಸಿಎಂ, ಡಿಸಿಎಂ ಅವರು ಬಜೆಟ್‌ನಲ್ಲಿ ಹಣವನ್ನು ಕೊಡದೆ ಸಂಪೂರ್ಣವಾಗಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಪ್ರಧಾನಮಂತ್ರಿ ವಿರುದ್ಧವಾಗಿ ಹಾಗೂ 15 ನೇ ಹಣಕಾಸು ಆಯೋಗದ ಬಗ್ಗೆ ನಿರಾಧಾರವಾದ ಆರೋಪಗಳನ್ನು ಸಿಎಂ ಮಾಡಿದ್ದಾರೆ, ಬರದ ಬಗ್ಗೆಯೂ ಮಾತಾಡ್ತಿದ್ದಾರೆ. ಇದೆಲ್ಲವನ್ನೂ ಬಯಲಿಗೆಳೆಯಲು ನಮ್ಮ ನಾಯಕರಾದ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಹೇಳಿದ್ದೇವೆ.ಅದಕ್ಕೆ ಪೂರಕವಾಗಿ ನವೆಂಬರ್ 2ರಂದು ಯಡಿಯೂರಪ್ಪ ಅವರು ಸುದ್ದಿಗೋಷ್ಟಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.