ಬೆಂಗಳೂರು:ವಿಗ್ರಹ ಇಟ್ಟುಕೊಂಡು ವಿಚಾರಗಳನ್ನು ಕೊಲ್ಲುವುದು ಬಿಜೆಪಿ ಪರಿವಾರದ ಚಾಳಿ. ಸಂವಿಧಾನ ವಿರೋಧಿಸುವ ಬಿಜೆಪಿ, ಚುನಾವಣೆಗಾಗಿ ಅಂಬೇಡ್ಕರ್ ಪ್ರತಿಮೆ ಇಟ್ಟುಕೊಂಡು ಡ್ರಾಮಾ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ರಾಜ್ಯದ ದಲಿತ ಸಂಘಟನೆಗಳು ಟೌನ್ ಹಾಲ್‌ನಲ್ಲಿ ಇಂದು ಹಮ್ಮಿಕೊಂಡಿದ್ದ ಭೀಮ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕದಿದ್ದರೆ ಈ ಸ್ವಾತಂತ್ರ್ಯ ಸೌಧವನ್ನು ದೇಶದ ಜನರೇ ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಎಚ್ಚರಿಸಿದರು. ಜಾತಿ ಸಮಾಜಕ್ಕೆ ಚಲನೆ ಇರುವುದಿಲ್ಲ. ಚಾಲನೆ ಬರಬೇಕಾದರೆ ಸಂವಿಧಾನಬದ್ದವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗಿ ಶೋಷಿತ ಸಮುದಾಯಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಅವಕಾಶಗಳನ್ನು ಕಲ್ಪಿಸುವುದೇ ನನ್ನ ರಾಜಕೀಯ ಬದ್ಧತೆ ಎಂದು ತಿಳಿಸಿದರು.
ಆರ್‌ಎಸ್ಎಸ್ ಸಂವಿಧಾನ ವಿರೋಧಿ: ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್‌ಎಸ್ಎಸ್ ನವರು ಸಂವಿಧಾನ ವಿರೋಧಿಗಳು. ಅಧಿಕಾರಕ್ಕಾಗಿ ಅಲ್ಲಿಗೆ ಹೋದ ಶೋಷಿತ ಸಮುದಾಯಗಳ ಪ್ರತಿನಿಧಿಗಳು ಮನುಸ್ಮೃತಿಯ ಆರಾಧಕರಾಗಿ ಸಂವಿಧಾನ ವಿರೋಧಿಗಳಾಗುತ್ತಿದ್ದಾರೆ. ಸಂವಿಧಾನ ಬದಲಾಯಿಸ್ತೀವಿ ಎಂದು ಅಹಂಕಾರ ಮೆರೆದವರನ್ನೇ ನೀವು ಬದಲಾಯಿಸಿದ್ದೀರಿ ಎಂದರು.
ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾ ಅವರಾಗಲಿ, ಪ್ರಧಾನಿ ಮೋದಿ ಅವರಾಗಲಿ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತರು. ಆದರೆ, ನಾವು-ನೀವು ಸುಮ್ಮನೆ ಕೂರಲಿಲ್ಲ. ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ. ಇದು 2024 ರಲ್ಲೂ ಪ್ರತಿಧ್ವನಿಸಬೇಕು, ಮರುಕಳಿಸಬೇಕು ಎಂದು ಕರೆ ಕೊಟ್ಟರು.