ಬೆಂಗಳೂರು:ವಕ್ಫ್ ಹಗರಣ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಗದ್ದಲ ನಡುವೆ ವೇಳೆ ಮಂಡಿಸಿ ನಿಯಮ ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್ ಎತ್ತಿದ ಪಾಯಿಂಟ್ ಆಫ್ ಆರ್ಡರ್(ಕ್ರಿಯಾಲೋಪ)ನ್ನು ತಿರಸ್ಕಾರ ಮಾಡಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪಾಯಿಂಟ್ ಆಫ್ ಆರ್ಡರ್ ಪ್ರಸ್ತಾಪಿಸಿದರು. ವಕ್ಫ್ ಅಕ್ರಮ ವರದಿಯನ್ನು ಸದನದಲ್ಲಿ ಗದ್ದಲ ನಡೆಯುವಾಗಲೇ ನಿನ್ನೆ ಸಚಿವರು ಮಂಡಿಸಿದ್ದಾರೆ. ಇದು ನಿಯಮಾವಳಿ ವಿರುದ್ದವಾಗಿದೆ. ನಿಯಮ ಮೀರಿ ವರದಿ ಮಂಡನೆ ಆಗಿದೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.
ನಮ್ಮ ಪರಿಷತ್ನಲ್ಲಿ ನಿಯಮ ಇದೆ. ನಿಯಮ ಮೀರಿ ವರದಿ ಮಂಡನೆ ಆಗಿದೆ. ಉದ್ದೇಶ ಪೂರ್ವಕವಾಗಿ ಸರ್ಕಾರ ಕ್ರೈಂ ಮಾಡಿದೆ. ನಮಗೂ ಶೇ 40ರಷ್ಟು ಭ್ರಷ್ಟಾಚಾರ ಆರೋಪ ಕುರಿತ ಚರ್ಚೆಗೆ ಅವಕಾಶ ಕೊಡಿ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸುಪ್ರೀಂಕೋರ್ಟ್ ವರದಿ ಮಂಡನೆ ಮಾಡಲು ಹೇಳಿದೆ. ಕೆಳಮನೆಯಲ್ಲಿ ವರದಿ ಮಂಡನೆ ಆಗಿದೆ. ಹೀಗಾಗಿ ಇಲ್ಲೂ ಕೂಡಾ ವರದಿ ಮಂಡನೆ ಮಾಡಿದ್ದೇವೆ ಎಂದರು.
ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹ:ಸರ್ಕಾರದ ಈ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು. ಸದನದಲ್ಲಿ ಗದ್ದಲ ಗಲಾಟೆಯಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆಯಿತು. 40 ಪರ್ಸೆಂಟ್ ಕಮಿಷನ್ ಚರ್ಚೆಗೆ ಅವಕಾಶ ಕೊಡುವಂತೆ ಕಾಂಗ್ರೆಸ್ ಆಗ್ರಹಿಸಿತು. ಈ ವೇಳೆ ಸದನಕ್ಕೆ ಕಾಂಗ್ರೆಸ್ ಸದಸ್ಯರು 40 ಪರ್ಸೆಂಟ್ ಹೆಸರು ಇರುವ ಮಾಸ್ಕ್ ಧರಿಸಿ ಬಂದಿದ್ದರು.
ಕಾಂಗ್ರೆಸ್ ಮಾಸ್ಕ್ಗೆ ವಿರೋಧ ಮಾಡಿದ ಬಿಜೆಪಿ ಯಾಕೆ ಮಾಸ್ಕ್ ಹಾಕಿದ್ದಾರೆ. ಇದು ಸರಿಯಲ್ಲ ಎಂದರು. ಇದಕ್ಕೆ ಟಾಂಗ್ ನೀಡಿದ ಕಾಂಗ್ರೆಸ್ ಸದಸ್ಯ ರವಿ, ಕುಂಬಳಕಾಯಿ ಕಳ್ಳ ಎಂದರೆ ನೀವು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ. ಬಿಜೆಪಿ ಸರ್ಕಾರ ಇಳಿಸೋವರೆಗೂ ಮಾಸ್ಕ್ ಹಾಕುತ್ತೇವೆ ಎಂದರು.