ಬೆಂಗಳೂರು:ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಿದ್ದಂತೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಮೌನಕ್ಕೆ ಜಾರಿದ್ದಾರೆ. ಪದಗಳ ಮೂಲಕ ಅಸಮಾಧಾನ ಹೊರಹಾಕದಿದ್ದರೂ ನಡವಳಿಕೆಯಲ್ಲಿ ಅಸಮಾಧಾನ ಸ್ಪಷ್ಟವಾಗಿದ್ದು, ಆರಂಭದಲ್ಲೇ ಡ್ಯಾಮೇಜ್ ಕಂಟ್ರೋಲ್ಗೆ ಖುದ್ದು ಯಡಿಯೂರಪ್ಪ ಮುಂದಾಗಿದ್ದಾರೆ.
ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಬಿಎಸ್ವೈ ಆಪ್ತರು, ಪಕ್ಷ ನಿಷ್ಠರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಆದರೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಮಾತ್ರ ಯಾವ ಪ್ರತಿಕ್ರಿಯೆ ನೀಡದೆ ಅಸಮಾಧಾನಗೊಂಡಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಗರಂ ಆಗಿದ್ದು, ಅವಕಾಶ ಕೈತಪ್ಪಿದ್ದಕ್ಕೆ ಸಿಡಿಮಿಡಿಗೊಂಡಿದ್ದಾರೆ. ವಿಜಯನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸಿಟ್ಟಿನಲ್ಲೇ ತೆರಳಿದ್ದಾರೆ.
ಇದನ್ನೂ ಓದಿ :ಸಾಮರ್ಥ್ಯಕ್ಕೆ ಅನುಗುಣವಾಗಿ ಹೈಕಮಾಂಡ್ ಜವಾಬ್ದಾರಿ ನೀಡಿದೆ: ವಿಜಯೇಂದ್ರ ರಾಜ್ಯಾಧ್ಯಕ್ಷ ಆಯ್ಕೆಗೆ ಕೋಟ ಶ್ರೀನಿವಾಸ ಪೂಜಾರಿ ಹರ್ಷ
ಇನ್ನು ಮತ್ತೊಂದು ಕಡೆ ಶಾಸಕ ಅರವಿಂದ ಬೆಲ್ಲದ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾರಿಗೂ ಸಿಕ್ಕಿಲ್ಲ, ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಮಾಜಿ ಸಚಿವ ಸಿ.ಟಿ ರವಿ ಪ್ರತಿಕ್ರಿಯೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ, ನಿಗೂಢ ಅರ್ಥ ಬರುವಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಇದೆಲ್ಲದರ ಬಗ್ಗೆ ಮಾಹಿತಿ ಪಡೆದ ಯಡಿಯೂರಪ್ಪ ಖುದ್ದು ಅಖಾಡಕ್ಕೆ ಧುಮುಕಿದ್ದಾರೆ. ಸಿ.ಟಿ ರವಿ, ಸೋಮಣ್ಣ, ಯತ್ನಾಳ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಆದರ ಅವರ ಪ್ರಯತ್ನಕ್ಕೆ ಎಷ್ಟರಮಟ್ಟಿಗೆ ಫಲಿತಾಂಶ ಸಿಗಲಿದೆ ಎನ್ನುವುದು ಒಂದೆರಡು ದಿನದಲ್ಲಿ ಗೊತ್ತಾಗಲಿದೆ.
2024ರ ನಂತರ ವೈಯಕ್ತಿಕ ರಾಜಕಾರಣ:ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿರಲಿಲ್ಲ, ಹಾಗಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ. ನಾವೇನು ಸನ್ಯಾಸಿಗಳಲ್ಲ, ಈಗೇನಿದ್ದರೂ ಮೋದಿ ಸರ್ಕಾರ ಅಧಿಕಾರಕ್ಕೆ ತರುವುದಷ್ಟೆ ನನ್ನ ಗುರಿ, ಅದಕ್ಕಷ್ಟೇ ಸಮಯ ನೀಡಲಿದ್ದೇನೆ. ನಮ್ಮ ವೈಯಕ್ತಿಕ ರಾಜಕಾರಣ 2024ರ ನಂತರವಾಗಲಿದೆ, ಈಗೇನಿದ್ದರೂ ರಾಷ್ಟ್ರ ಹಿತದ ರಾಜಕಾರಣ, ಮೋದಿ ಸರ್ಕಾರ ಮತ್ತೆ ತರಬೇಕು ಎನ್ನುವುದಷ್ಟೇ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹ ಯೋಗ್ಯತೆ ಬಹಳಷ್ಟು ಜನರಿಗಿದೆ. ಆದರೆ ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂದು ಹೈಕಮಾಂಡ್ ನಿರ್ಧರಿಸಲಿದೆ. ಈಗ ಅದನ್ನೇ ಹೈಕಮಾಂಡ್ ಮಾಡಿದೆ ಎಂದು ಸಿ.ಟಿ ರವಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :ಆದಿಚುಂಚನಗಿರಿ ಶ್ರೀಗಳಿಂದ ಆಶೀರ್ವಾದ ಪಡೆದ ವಿಜಯೇಂದ್ರ: ಇಂದು ಸಿದ್ದಗಂಗಾ ಮಠ, ಯಡಿಯೂರು ದೇವಸ್ಥಾನಕ್ಕೆ ಟೆಂಪಲ್‌ರನ್