ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವಾಗಲೇ 'ಥರ್ಡ್ ಡಿಗ್ರಿ ಟ್ರೀಟ್ಮೆಂಟ್' ನೀಡಿದ ಆರೋಪದಡಿ ವರ್ತೂರು ಪೊಲೀಸ್ ಠಾಣೆಯ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಆದೇಶಿಸಿದ್ದಾರೆ.
ಮನೆಗಳ್ಳತನ ಪ್ರಕರಣವೊಂದರ ಸಂಬಂಧ ಸಲ್ಮಾನ್ ಎಂಬಾತನನ್ನು ಕರೆ ತಂದಿದ್ದ ವರ್ತೂರು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಲ್ಮಾನ್ ಕುಟುಂಬಸ್ಥರು ಡಿಸಿಪಿಗೆ ದೂರು ನೀಡಿದ್ದರು. ದೂರಿನನ್ವಯ ಕೈಗೊಂಡ ತನಿಖೆಯಲ್ಲಿ ಮೇಲ್ನೊಟಕ್ಕೆ ಸರಿಯಾಗಿ ಕಾನೂನು ಪಾಲನೆ ಮಾಡದಿರುವ ಬಗ್ಗೆ ಗೊತ್ತಾಗಿದ್ದು ಕ್ರಮ ಕೈಗೊಳ್ಳಲಾಗಿದೆ.
ವಾಹನಗಳ ಬ್ಯಾಟರಿ ಕಳವು ಆರೋಪ ಪ್ರಕರಣ ಸಂಬಂಧ ಅಕ್ಟೋಬರ್ 27ರಂದು ವರ್ತೂರು ಠಾಣಾ ಪೊಲೀಸರು ಬಂಧಿಸಿ, ಮೂರು ದಿನಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದರು ಎಂದು ದೂರಲಾಗಿದೆ. ಆ ಬಳಿಕ ಬ್ಯಾಟರಿ ಕಳವು ಪ್ರಕರಣ ಮಾತ್ರವಲ್ಲದೆ, ಇನ್ನಿತರೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸಲ್ಮಾನ್ ಖಾನ್ ದೂರಿದ್ದಾರೆ.
ನನ್ನ ಮಗನನ್ನು ಯಾವುದೋ ಕಳ್ಳತನದ ಸುಳ್ಳು ಆರೋಪದಲ್ಲಿ ಸಿಲುಕಿಸಿ ಮಾರಣಾಂತಿಕವಾಗಿ ಹೊಡೆದಿದ್ದಾರೆ. ಇದರಿಂದಾಗಿ ಆತನ ಬಲಗೈಗೆ ಭಾರಿ ಪೆಟ್ಟು ಬಿದ್ದು, ರಕ್ತ ಹೆಪ್ಪುಗಟ್ಟಿತ್ತು. ತಕ್ಷಣವೇ ಸಲ್ಮಾನ್ನನ್ನು ವೈದೇಹಿ ಆಸ್ಪತ್ರೆಗೆ ಸೇರಿಸಿದ್ದೆವು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹಾಸ್ಮಟ್ ಆಸ್ಪತ್ರೆಗೆ ಸೇರಿಸಿದ್ದೆವು. ಆಗ ಸಲ್ಮಾನ್ ಕೈ ಪರಿಶೀಲಿಸಿದ ವೈದ್ಯರು, ಕೈಗೆ ದೊಡ್ಡ ಪ್ರಮಾಣದ ಏಟು ಬಿದ್ದಿದ್ದು, ಕೀವು ತುಂಬಿದೆ. ಜೊತೆಗೆ ರಕ್ತ ಹೆಪ್ಪುಗಟ್ಟಿದೆ. ಇದರಿಂದ ಕೈ ಕತ್ತರಿಸಬೇಕು ಎಂದು ಹೇಳಿದರು. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಕೈ ಕತ್ತರಿಸಲಾಗಿದೆ. ಈ ಚಿಕಿತ್ಸೆಗೆ ಎರಡೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ:ಪೊಲೀಸರ ಹೊಡೆತಕ್ಕೆ ಬಲಗೈ ಕಳೆದುಕೊಂಡ ಯುವಕ... ಪೋಷಕರಿಂದ ಗಂಭೀರ ಆರೋಪ