ಬೆಂಗಳೂರು :ತಾಯಿಯ ಉತ್ಕೃಷ್ಟ ಎದೆ ಹಾಲಿನ ಕೊರತೆಯಿಂದಾಗಿ ಅದೆಷ್ಟು ಶಿಶುಗಳು ಅರಳುವ ಮುನ್ನವೇ ಕಮರುತ್ತಿವೆ. ಹೀಗಾಗಿ, ಅಂತಹ ಮುಗ್ಧ ಕುಸುಮಗಳಿಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ತಾಯಿ 'ಎದೆ ಹಾಲಿನ ಬ್ಯಾಂಕ್' ಆರಂಭಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲೇ ಮೊದಲ ಬಾರಿಗೆ ಎದೆ ಹಾಲಿನ ಬ್ಯಾಂಕ್ ಆರಂಭಿಸುತ್ತಿರುವುದು ವಿಶೇಷ.
ವಾಣಿವಿಲಾಸ ಆಸ್ಪತ್ರೆಯ ಮದರ್ಸ್ ಮಿಲ್ಕ್ ಬ್ಯಾಂಕ್ಗೆ ಕೂಡಿ ಬಂತು ಉದ್ಘಾಟನೆ ಭಾಗ್ಯ ಕೊರೊನಾ ಕಾರಣದಿಂದ ಮಿಲ್ಕ್ ಬ್ಯಾಂಕ್ ಕೆಲಸ ಪೂರ್ಣಗೊಂಡರು ಉದ್ಘಾಟನೆ ಭ್ಯಾಗ ಸಿಕ್ಕಿರಲಿಲ್ಲ. ಆದರೆ, ಮುಂದಿನ ವಾರವೇ ಮದರ್ಸ್ ಮಿಲ್ಕ್ ಬ್ಯಾಂಕ್ ಉದ್ಘಾಟನೆಗೆ ಸಜ್ಜಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಿಲ್ಕ್ ಬ್ಯಾಂಕ್ಗೆ ಚಾಲನೆ ನೀಡುವ ನಿರೀಕ್ಷೆಯಿದೆ.
ಸತತ 3-4 ವರ್ಷಗಳ ಪರಿಶ್ರಮದಿಂದಾಗಿ ಮಿಲ್ಕ್ ಬ್ಯಾಂಕ್ ಕನಸು ಈಗ ನನಸಾಗುತ್ತಿದೆ. ಮೊದಲು 35 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಹಣ ಒಳಾಂಗಣಕ್ಕೆ ಮಾತ್ರ ಸಾಗುವಷ್ಟು ಇತ್ತು. ಆದರೆ, ಅದರ ಪರಿಕರಗಳಿಗೆ ಬೇಕಾಗಿರುವ 90 ಲಕ್ಷ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆಡಳಿತ ಮಂಡಳಿ ಮನವಿ ಮಾಡಿತ್ತು.
ತಾಯಿ ಎದೆ ಹಾಲು ಸಂರಕ್ಷಣೆ ಮಾಡುವುದಕ್ಕೆ ಸಾಕಷ್ಟು ಮುತುವರ್ಜಿ ವಹಿಸಬೇಕು. ಹೀಗಾಗಿ, ಕೆಲಸ ನಿಧಾನವಾದರೂ ಎಲ್ಲವೂ ಸರಿ ಇರಬೇಕು ಎಂಬ ಕಾರಣಕ್ಕೆ ಆಸ್ಪತ್ರೆಯ ಅಧಿಕಾರಿಗಳು ನಿರ್ಧರಿಸಿದ್ದರು. ಹಾಗೇ, ಪ್ರತಿ ನವಜಾತ ಶಿಶುಗಳಿಗೂ ತಾಯಿಯ ಎದೆ ಹಾಲು ಅಮೃತ. ಹೀಗಾಗಿ, ಹುಟ್ಟಿದ ಮಗುವಿಗೆ ತಕ್ಷಣ ಎದೆ ಹಾಲುಣಿಸಲಾಗುತ್ತದೆ.
ಆದರೆ, ಇತ್ತೀಚೆಗೆ ನಾನಾ ಕಾರಣಗಳಿಂದ ಪೌಷ್ಠಿಕ ಎದೆ ಹಾಲಿನ ಕೊರತೆಯಿಂದಾಗಿ ಅದೆಷ್ಟು ಶಿಶುಗಳು ಸಾವನ್ನಪ್ಪುತ್ತಿವೆ. ಈ ನಿಟ್ಟಿನಲ್ಲಿ ಎದೆ ಹಾಲಿನ ಕೊರತೆ ನೀಗಿಸಲು ಬೆಂಗಳೂರಿನಲ್ಲಿ ಎದೆ ಹಾಲು ಮಾರಾಟ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿದೆ.
ಈಗಾಗಲೇ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಮದರ್ಸ್ ಮಿಲ್ಕ್ ಬ್ಯಾಂಕ್ಗಳಿವೆ. ಆದರೆ, ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮದರ್ಸ್ ಮಿಲ್ಕ್ ಬ್ಯಾಂಕ್ ತೆರೆಯಲಾಗುತ್ತಿದೆ. ಈ ಮೂಲಕ ಮೊದಲ ಸರ್ಕಾರಿ ಮದರ್ಸ್ ಮಿಲ್ಕ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ವಾಣಿವಿಲಾಸ ಆಸ್ಪತ್ರೆಗೆ ಪಾತ್ರವಾಗಲಿದೆ.
ಎದೆ ಹಾಲು ಸಂಗ್ರಹಣೆ ಹೇಗೆ ಮಾಡಲಾಗುತ್ತದೆ? :ಬೇರೆ ತಾಯಂದಿರಿಂದ ಸಂಗ್ರಹಿಸುವ ಎದೆ ಹಾಲನ್ನು ಸೂಕ್ತ ಪರೀಕ್ಷೆಗೆ ಒಳಪಡಿಸಬೇಕಾಗುತ್ತೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇದು ಬಹುಮುಖ್ಯ. ಬ್ಯಾಕ್ಟೀರಿಯಾ ಪರೀಕ್ಷೆಗೆ ಒಳಪಡಿಸಿದ ನಂತರ ಸುಮಾರು 62.05 ಡಿಗ್ರಿ ಉಷ್ಣಾಂಶದಲ್ಲಿ ಕುದಿಸಿ ಪ್ಯಾಕ್ ಮಾಡಲಾಗುತ್ತೆ. ಬಳಿಕ ಈ ಹಾಲನ್ನು 20 ಡ್ರಿಗಿ ಸೆಲ್ಸಿಯೆಸ್‍ನಲ್ಲಿ ಇಡಲಾಗುತ್ತೆ. ಗರಿಷ್ಟ 2 ತಿಂಗಳ ಕಾಲ ಎದೆ ಹಾಲನ್ನು ಸಂಗ್ರಹಿಸಬಹುದಾಗಿದೆ.
ಸಾಕಷ್ಟು ಸುರಕ್ಷತೆ ನಿಯಮಗಳೊಂದಿಗೆ ಎದೆ ಹಾಲಿನ ಸಂಗ್ರಹಣೆ ಸದ್ಯ ಕಾರ್ಯ ರೂಪಕ್ಕೆ ಬರಲಿದೆ. ಎಲ್ಲವೂ ಅಂದುಕೊಂಡತೆ ಆದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬ್ಲಡ್ ಬ್ಯಾಂಕ್‍ನಂತೆಯೇ, ಸರ್ಕಾರಿ ಮದರ್ಸ್ ಮಿಲ್ಕ್ ಬ್ಯಾಂಕ್ ಕೂಡ ಕಾರ್ಯ ನಿರ್ವಹಿಸಲಿದೆ.
ಓದಿ:ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ವಿಚಾರ: ಸಮಸ್ಯೆಗಳಿದ್ದರೆ ಬಗೆಹರಿಸುತ್ತೇವೆ-ಸಚಿವ ಸುಧಾಕರ್