ಬೆಂಗಳೂರು:ರಾಜಕೀಯ ನಿಂತ ನೀರಲ್ಲ, ದೊಡ್ಡವರ ಮಾತು ಕೇಳಿ ನೋವು ಮಾಡಿಕೊಂಡೆ. ನನ್ನ ಈ ಪರಿಸ್ಥಿತಿಗೆ ಕಾರಣರಾದವರ ಹತ್ತಿರ ವರಿಷ್ಟರು ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದರು.
ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ವಿಜಯನಗರದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಮತ್ತು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿ ಮಾಡಿಲ್ಲ ಮತ್ತು ನಾನು ಲೋಕಸಭೆಗೆ ಟಿಕೇಟು ಕೇಳಿಲ್ಲ. ಕ್ಷೇತ್ರದಲ್ಲಿ ಬಡವರಿಗೆ, ಸಾಮಾನ್ಯರಿಗೆ ಸ್ಪಂದಿಸಿದ್ದೇನೆ. ನಾನು ಮಾಡಿದ ತಪ್ಪಿಗೆ ಕಾರ್ಯಕರ್ತರು ನೋವು ಆನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ರಾಜಕೀಯದಲ್ಲಿ ಅನಾನುಕೂಲತೆ ಆಗುವುದು ಸಹಜ, ನಾವು ಮಾಡಿರುವ ಅಭಿವೃದ್ಧಿ ಕೆಲಸ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ನಿಂತಿದೆ. ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಶಿವಕುಮಾರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ 45 ವರ್ಷಗಳಿಂದ ಸಾಮಾಜಿಕ ಜೀವನದಲ್ಲಿ ದುಡಿಯುತ್ತಿದ್ದೇನೆ. ಮುಂದೆ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭವ್ಯ ಭಾರತ ನಿರ್ಮಾಣವಾಗಲಿದೆ. 140 ಕೋಟಿ ಭಾರತೀಯರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ರಾಮಜನ್ಮ ಭೂಮಿ ಆಗಬಾರದು ಎಂದು ಹೋರಾಟ ಮಾಡಿದ್ದ ವ್ಯಕ್ತಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಕುವೆಂಪು ಚಿರಸ್ಥಾಯಿ:ಯುಗದ ಕವಿ, ಜಗದ ಕವಿ, ಮನುಜ ಮತ ವಿಶ್ವಪಥ' ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಕುವೆಂಪು ಆಗಿದ್ದಾರೆ. ಸೂರ್ಯ ಚಂದ್ರ ಇರುವರಿಗೂ ಕುವೆಂಪು ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಕುವೆಂಪು ಅವರ ದೂರದೃಷ್ಟಿ ಚಿಂತನೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದು ಹೇಳಿದರು.