ಬೆಂಗಳೂರು: ಅನುಮತಿ ಇಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಕ್ಕಳ ಫೋಟೋ ಬಳಸಿಕೊಂಡ ಆರೋಪದಡಿ ಎರಡು ಖಾಸಗಿ ಯೂಟ್ಯೂಬ್ ವಾಹಿನಿಗಳ ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿಕೆಶಿ ಕುಟುಂಬದ ಆಪ್ತರಾದ ಉಮೇಶ್ ಎಂಬುವವರು ನೀಡಿದ ದೂರಿನನ್ವಯ ಈ ಎಫ್ಐಆರ್ ದಾಖಲಾಗಿದೆ.
ಬಿ4ಯು ಕರ್ನಾಟಕ (B4uKannada) ಹಾಗೂ ಇಂಡಿಯಾ ರಿಪೋರ್ಟ್ (India report) ಹೆಸರಿನ ಎರಡು ಯೂಟ್ಯೂಬ್ ವಾಹಿನಿಗಳು 'ಹೂ ಇಸ್ ಅಭರಣ ಡಿ.ಕೆ ಶಿವಕುಮಾರ್' ಹಾಗೂ 'ಡಿಕೆಶಿ ಮಗ ಯಾರು..?', ಬಂಡೆ ಮಕ್ಕಳು ಏನ್ಮಾಡ್ತಿದ್ದಾರೆ? ಎಂಬ ತಲೆಬರಹದಡಿ ವಿಡಿಯೋ ಸೃಷ್ಟಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿವೆ ಎಂದು ಉಮೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಇದನ್ನೂ ಓದಿ:'ಬಿಜೆಪಿಯವರು ಯಡಿಯೂರಪ್ಪರನ್ನೇ ಪಂಕ್ಚರ್ ಮಾಡಿದ್ದಾರೆ'
ಅಲ್ಲದೇ, ಇವರ ಮಕ್ಕಳು ಮೀಡಿಯಾ ಮುಂದೆ ಬರೋದಿಲ್ಲ ಯಾಕೆ? ಎಂದು ಇಂಡಿಯಾ ರಿಪೋರ್ಟ್ ವರದಿ ಮಾಡಿದೆ. ಹೂ ಇಸ್ ಅಭರಣ ಡಿ.ಕೆ ಶಿವಕುಮಾರ್ ಎಂದು ಇಂಡಿಯಾ ರಿಪೋರ್ಟ್ ವರದಿ ಎಂದೂ ಎರಡೂ ಯೂಟ್ಯೂಬ್ ಚಾನಲ್ಗಳ ಲಿಂಕ್ ಸಮೇತವಾಗಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ಈ ವಿಡಿಯೋಗಳಲ್ಲಿ ಅನುಮತಿ ಇಲ್ಲದೆ ಶಿವಕುಮಾರ್ ಅವರ ಮಗಳು ಮತ್ತು ಮಗನ ವಿಡಿಯೋ ಬಳಕೆ ಮಾಡಲಾಗಿದೆ ಎಂದು ಹೇಳಿದ್ದರು.
ಹೀಗೆ ಅನುಮತಿ ಇಲ್ಲದೇ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವ ಅಪರಿಚಿತ ಆಸಾಮಿಯನ್ನು ಪತ್ತೆ ಮಾಡಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ವಿಡಿಯೋವನ್ನು ಡಿಲೀಟ್ ಮಾಡಿಸಬೇಕೆಂದು ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಉಮೇಶ್ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಹೀಗಾಗಿ ಈ ದೂರಿನನ್ವಯ ಎರಡೂ ಯೂಟ್ಯೂಬ್ ವಾಹಿನಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದಿಂದಲೇ ಮೇಕೆದಾಟು ಯೋಜನೆಗೆ ಚಾಲನೆ: ಡಿ ಕೆ ಶಿವಕುಮಾರ್