ಬೆಂಗಳೂರು:ಕವಾಟದ ಉಸಿರಾಟಕಾರಕ (ವಾಲ್ವ್‍ಡ್ ರೆಸ್ಪಿರೇಟರ್) ಹೊಂದಿರುವ ಎನ್-95 ಮಾಸ್ಕ್ ಬಳಕೆಯಿಂದ ಕೊರೊನಾ ವೈರಸ್ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಈ ಮಾಸ್ಕ್ಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಹೈ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.
ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ಗಳ ಬೆಲೆ ನಿಯಂತ್ರಿಸುವ ಮತ್ತು ಲಭ್ಯತೆಯ ಕುರಿತಂತೆ ಡಾ. ರಾಜೀವ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪೂರಕವಾಗಿ ನಗರದ ವಕೀಲೆ ಗೀತಾ ಮಿಶ್ರಾ ಈ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಜುಲೈ 20ರಂದು ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿ ಎನ್-95 ಮಾಸ್ಕ್ ಗಳ ಬಳಕೆ ಉತ್ತಮವಲ್ಲ. ವಾಲ್ವ್‍ಡ್ ರೆಸ್ಪಿರೇಟರ್ ಹೊಂದಿರುವ ಎನ್ 95 ಮಾಸ್ಕ್ಗಳು ಕೊರೊನಾ ವೈರಸ್ ತಡೆಯಲಾರವು. ಹಾಗೆಯೇ ಇವುಗಳ ಬಳಕೆಯು ಹಾನಿಕಾರಕ. ಹೀಗಾಗಿ ಇವುಗಳನ್ನು ಬಳಸುವ ಬದಲು ಜನಸಾಮಾನ್ಯರು ಮನೆಯಲ್ಲೇ ಸಿದ್ಧಪಡಿಸಿದ ಮಾಸ್ಕ್ಗಳನ್ನು ಬಳಸುವಂತೆ ಸಲಹೆ ನೀಡಿದೆ.
ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ ನಂತರವೂ ಎನ್ 95 ಮಾಸ್ಕ್ ಗಳ ಬಳಕೆ ಯಥಾವತ್ತಾಗಿ ಮುಂದುವರೆದಿದೆ. ಹೀಗಾಗಿ ಕೇಂದ್ರ ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಮಾಸ್ಕ್ ಗಳ ಬಳಕೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.