ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಸ್ಥಾನ ರದ್ದು : ಆಕಾಂಕ್ಷಿಗಳಲ್ಲಿ ಮುಗಿಯದ ಅಸಮಾಧಾನ - no DCM post in karnataka cabinet

ತಾವು ಡಿಸಿಎಂ ಆಗುತ್ತೇವೆ ಎಂದು ಕೆಲ ನಾಯಕರು ಹಲವೆಡೆ ಹೇಳಿಕೊಂಡಿದ್ದರು. ಆದರೆ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಯಾವುದೇ ಗೊಂದಲ ಇಲ್ಲದೇ ಸಚಿವ ಸಂಪುಟ ರಚಿಸಿ, ಡಿಸಿಎಂ ಹುದ್ದೆ ವಿಚಾರದಲ್ಲಿ ಯಾರದ್ದೂ ಮನಸು ಕೆಡಿಸುವುದು ಬೇಡ ಎನ್ನುವ ಉದ್ದೇಶಕ್ಕೆ ಸರ್ಕಾರ ಬಂದಿದೆ.

upset-continues-in-dcm-post-aspirants
ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಸ್ಥಾನ ರದ್ದು

By

Published : Aug 6, 2021, 2:26 AM IST

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಕನಸು ಕಾಣುತ್ತಿದ್ದವರಿಗೆ ನಿರಾಸೆಯಾಗಿ ಎರಡು ದಿನ ಕಳೆದರೂ, ಇನ್ನೂ ಅದರ ಬೇಗುದಿ ತಣಿದಿಲ್ಲ. ಆಕಾಂಕ್ಷಿಗಳು ಯಾಕೆ ಹೀಗಾಯಿತು ಎಂಬ ಚಿಂತೆಯಲ್ಲೇ ಇದ್ದಾರೆ.

ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯೊಂದಿಗೆ ರಾಜ್ಯದಲ್ಲಿ ಎರಡು ವರ್ಷದ ಬಿಜೆಪಿ ಸರ್ಕಾರದಲ್ಲಿ ಡಿಸಿಎಂಗಳಾಗಿ ಕಾರ್ಯನಿರ್ವಹಿಸಿದ್ದ ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣ್, ಲಕ್ಷ್ಮಣ್​ ಸವದಿ ಸಹ ಮಾಜಿಗಳಾದರು. ಇವರಲ್ಲಿ ಸವದಿಗೆ ಮರಳಿ ಸಂಪುಟಕ್ಕೆ ಬರುವ ಅವಕಾಶವೂ ದೊರಕಲಿಲ್ಲ. ಉಳಿದಿಬ್ಬರಿಗೂ ಮತ್ತೆ ಡಿಸಿಎಂ ಭಾಗ್ಯ ಸಿಗುವುದು ಅನುಮಾನ ಎನ್ನಲಾಗುತ್ತಿತ್ತು. ಒಕ್ಕಲಿಗರು, ಒಬಿಸಿ, ಲಿಂಗಾಯಿತ ಅನ್ನುವ ಕೆಟಗರಿಯಲ್ಲಿ ಮೂವರಿಗೆ ಡಿಸಿಎಂ ಹುದ್ದೆ ನೀಡಲಾಗಿತ್ತು. ಆದರೆ ಬಿಎಸ್​​ವೈ ಕೆಳಗಿಳಿದು, ಬಸವರಾಜ್ ಬೊಮ್ಮಾಯಿ ಪಟ್ಟಕ್ಕೇರುತ್ತಿದ್ದಂತೆ ಒಕ್ಕಲಿಗ ಸಮುದಾಯದಿಂದ ಆರ್. ಅಶೋಕ್, ಒಬಿಸಿ ವರ್ಗದಿಂದ ಕೆ.ಎಸ್. ಈಶ್ವರಪ್ಪ ಹಾಗೂ ಲಿಂಗಾಯಿತ ಸಮುದಾಯದಿಂದ ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ನಾಯಕರ ಹೆಸರು ಕೇಳಿಬಂತು. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಸರೂ ಅತ್ತಿತ್ತ ಸುಳಿಯಿತು. ಈ ಎಲ್ಲಾ ಪ್ರಯತ್ನಗಳ ಅರಿವು ಹೊಂದಿದ್ದ ಬಿಜೆಪಿ ಹಾಗೂ ಬಸವರಾಜ ಬೊಮ್ಮಾಯಿ ಯಾವುದೇ ಡಿಸಿಎಂ ಸ್ಥಾನ ಇಲ್ಲ ಎಂದು ಘೋಷಿಸಿದರು. ಇದರಿಂದ ಆಕಾಂಕ್ಷಿಗಳಲ್ಲಿ ಭ್ರಮನಿರಸನ ಕಾಡಿದೆ.

ಆದರೂ ಪ್ರಯತ್ನ ಈಗಲೂ ಮುಂದುವರೆಸಿರುವ ನಾಯಕರು ಡಿಸಿಎಂ ಸ್ಥಾನ ಬೇಡ ಅನ್ನುವ ತೀರ್ಮಾನ ರಾಜ್ಯ ನಾಯಕರ ಮಧ್ಯೆ ಆಗಿದ್ದೋ, ರಾಷ್ಟ್ರೀಯ ನಾಯಕರ ತೀರ್ಮಾನವೋ ಎನ್ನುವ ಅನುಮಾನಕ್ಕೆ ಉತ್ತರ ಸಿಗದೇ ತೊಳಲಾಡುತ್ತಿದ್ದಾರೆ. ಆಕಾಂಕ್ಷಿಗಳ ಪಟ್ಟಿಯೇನು ಚಿಕ್ಕದಿರಲಿಲ್ಲ. ಆದರೆ ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ನಾಯಕರು.

ಹಿಂದೆ ಬಿಎಸ್​ವೈ ಸರ್ಕಾರ ರಚನೆಯಲ್ಲಿ ಡಾ. ಅಶ್ವತ್ಥನಾರಾಯಣ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆರ್. ಅಶೋಕ್ ಕೂಡ ಹಿರಿಯ ನಾಯಕರು. ತಮ್ಮದೇ ಆದ ಲಾಬಿ ಆರಂಭಿಸಿದ್ದರು. ಇನ್ನೊಂದೆಡೆ ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ತಾವು ಡಿಸಿಎಂ ಸ್ಥಾನ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಗೋವಿಂದ ಕಾರಜೋಳ ಕೂಡ ಸ್ಥಾನ ಬಿಡಲು ಸಿದ್ಧವಿರಲಿಲ್ಲ. ಅಚ್ಚರಿಯ ರೀತಿಯಲ್ಲಿ ಡಿಸಿಎಂ ಆಗಿ ಆಯ್ಕೆಯಾಗಿ ನಂತರ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಸವದಿ ಸಚಿವರೇ ಆಗಿಲ್ಲ. ಹೀಗಾಗಿ ಲಿಂಗಾಯಿತ ಸಮುದಾಯದಿಂದ ಹಲವು ಆಕಾಂಕ್ಷಿಗಳು ತಮ್ಮ ಆಶಯ ವ್ಯಕ್ತಪಡಿಸಿದ್ದರು.

ಇವರಲ್ಲದೇ ತಾವು ಡಿಸಿಎಂ ಆಗುತ್ತೇವೆ ಎಂದು ಬಿ. ಶ್ರೀರಾಮುಲು, ಬಸನಗೌಡ ಪಾಟೀಲ್ ಯತ್ನಾಳ್ ಹಲವೆಡೆ ಹೇಳಿಕೊಂಡಿದ್ದರು. ಆದರೆ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಯಾವುದೇ ಗೊಂದಲ ಇಲ್ಲದೇ ಸಚಿವ ಸಂಪುಟ ರಚಿಸಿ, ಡಿಸಿಎಂ ಹುದ್ದೆ ವಿಚಾರದಲ್ಲಿ ಯಾರದ್ದೂ ಮನಸು ಕೆಡಿಸುವುದು ಬೇಡ ಎನ್ನುವ ಉದ್ದೇಶಕ್ಕೆ ಸರ್ಕಾರ ಬಂದಿದೆ.

ಆದರೆ ಇದೇ ಹಲವು ಆಕಾಂಕ್ಷಿಗಳಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮುಂಬರುವ ದಿನಗಳಲ್ಲಿ ತಮಗೆ ಸಿಗುವ ವೇದಿಕೆಯಲ್ಲಿ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಮುಂದೆ ಇದೇ ವಿಚಾರ ಪ್ರಸ್ತಾಪಿಸಿ ತಮ್ಮ ಆಶಯ ಈಡೇರಿಸಿಕೊಳ್ಳಲು ಹಲವು ನಾಯಕರು ನಿರ್ಧಾರ ಮಾಡಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಈಗಲೂ ಡಿಸಿಎಂ ಆಕಾಂಕ್ಷಿಗಳ ಕನಸು ನನಸಾಗಿಯೇ ಉಳಿದಿದೆ.

ಇದನ್ನೂ ಓದಿ:'ಐ ಡೋಂಟ್​​ ಕೇರ್​​'... ಅಣ್ಣಾಮಲೈ ಮೇಕೆದಾಟು ಸತ್ಯಾಗ್ರಹಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ABOUT THE AUTHOR

...view details