ಕರ್ನಾಟಕ

karnataka

ETV Bharat / state

Upendra: ನಟ ಉಪೇಂದ್ರಗೆ ಹೈಕೋರ್ಟ್‌ ರಿಲೀಫ್‌; FIRಗೆ ತಡೆ - Scheduled Caste and Tribe

Actor Upendra gets Interim stay: ಫೇಸ್​ಬುಕ್ ಲೈವ್​ನಲ್ಲಿ ಪರಿಶಿಷ್ಟ ಜಾತಿಯ ಕುರಿತು ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್ ರದ್ದು ಕೋರಿ ನಟ ಉಪೇಂದ್ರ ಹೈಕೋರ್ಟ್​ ಮೊರೆ ಹೋಗಿದ್ದರು. ಇದೀಗ ಅವರು ನಿರಾಳರಾಗಿದ್ದಾರೆ.

ಉಪೇಂದ್ರ- ಹೈಕೋರ್ಟ್
ಉಪೇಂದ್ರ- ಹೈಕೋರ್ಟ್

By

Published : Aug 14, 2023, 3:01 PM IST

Updated : Aug 14, 2023, 3:50 PM IST

ಬೆಂಗಳೂರು : ನಟ, ನಿರ್ದೇಶಕ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ ಹೈಕೋರ್ಟ್ ಇಂದು ತಡೆ ನೀಡಿ ಆದೇಶಿಸಿದೆ. ಇತ್ತೀಚೆಗೆ ಫೇಸ್​ಬುಕ್​ ಲೈವ್​ನಲ್ಲಿ ವಿಡಿಯೋ ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಒಂದು ಪಂಗಡದ ಕುರಿತು ಆಕ್ಷೇಪಾರ್ಹ ಗಾದೆಮಾತು ಬಳಕೆ ಮಾಡಿದ್ದ ಆರೋಪದಲ್ಲಿ ದಾಖಲಾಗಿರುವ ಎಫ್​ಐಆರ್​ ರದ್ದು ಕೋರಿ ಉಪೇಂದ್ರ ಅಲಿಯಾಸ್​ ಬಿ.ಎಂ.ಉಪೇಂದ್ರಕುಮಾರ್​ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್​ ಚಂದನಗೌಡರ್​ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ನೀಡಿ ಆದೇಶಿಸಿತು. ಇದೇ ವೇಳೆ, ಪ್ರತಿವಾದಿಗಳಿಗೆ ನೊಟೀಸ್​ ಜಾರಿಗೊಳಿಸಿದೆ.

ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, "ಅರ್ಜಿದಾರ ಉಪೇಂದ್ರ ಯಾವುದೇ ಸಮಾಜಕ್ಕೆ ನೋವುಂಟು ಮಾಡಬೇಕೆಂಬ ಕಾರಣದಿಂದ ಹೇಳಿಕೆ ನೀಡಿಲ್ಲ. ಆಕಸ್ಮಿಕವಾಗಿ ಗಾದೆ ಬಳಕೆ ಮಾಡಿದ್ದಾರೆ. ಹೀಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು" ಎಂದು ನ್ಯಾಯಪೀಠವನ್ನು ಕೋರಿದರು.

"ಅರ್ಜಿದಾರರು ಹೆಸರಾಂತ ನಟರಾಗಿದ್ದು, ಸಮಾಜದ ಮೌಲ್ಯಗಳನ್ನು ಗೌರವಿಸುತ್ತಿದ್ದಾರೆ. ಸಮಾಜದಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ಫೇಸ್​ಬುಕ್​ ಪೇಜ್​ ಮೂಲಕ ತಮ್ಮನ್ನು ಅನುಸರಿಸುವವರಿಗಾಗಿ ಲೈವ್​ ಮಾಡಿದ್ದರು. ಈ ಸಂದರ್ಭದಲ್ಲಿ ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರಲಿದೆ ಎಂಬುದಾಗಿ ತಿಳಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ವರ್ಗಕ್ಕೆ ಸೇರಿದ್ದ ಸಮುದಾಯದ ಕುರಿತ ಗಾದೆಯೊಂದನ್ನು ಪ್ರಸ್ತಾಪಿಸಿದ್ದಾರೆ".

"ಅಲ್ಲದೆ, ಜಾತಿ, ಧರ್ಮ, ಸಮುದಾಯಗಳ ಆಧಾರದಲ್ಲಿ ಅವರು ಎಂದಿಗೂ ತಾರತಮ್ಯದಿಂದ ನೋಡಿಲ್ಲ. ತಮ್ಮ ಸಾರ್ವಜನಿಕ ಜೀವನದಲ್ಲಿ ಎಂದಿಗೂ ದಲಿತರನ್ನು ಪರಿಶಿಷ್ಟರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ಅರ್ಜಿದಾರರು ಎಲ್ಲ ಸಮುದಾಯಗಳಲ್ಲಿಯೂ ಅಪಾರ ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ".

"ಈ ಹೇಳಿಕೆಯಲ್ಲಿ ಯಾವುದೇ ಜಾತಿ, ಪಂಗಡಗಳನ್ನು ಅವಮಾನಿಸುವ ಉದ್ದೇಶವನ್ನು ಅವರು ಹೊಂದಿರಲಿಲ್ಲ. ಸಾಮಾನ್ಯ ಪದವನ್ನಾಗಿ ಬಳಕೆ ಮಾಡಿದ್ದಾರೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿ ಹೊಳಗೇರಿ ಎಂಬ ಸ್ಥಳವಿದೆ. ಹೊಲಗೇರಿ ಎಂಬ ರೀತಿಯಲ್ಲಿ ಉಪನಾಮ ಹೊಂದಿರುವವರೂ ಇದ್ದಾರೆ. ಈ ಗಾದೆಯನ್ನು ಬಳಕೆ ಮಾಡಿದ್ದರಿಂದ ಕೆಲವರಿಗೆ ನೋವಾಗಿದೆ ಎಂದು ಗೊತ್ತಾದ ತಕ್ಷಣ ವಿಡಿಯೋವನ್ನು ಡಿಲೀಟ್​ ಮಾಡಿದ್ದಾರೆ. ತಕ್ಷಣ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಹಳೆಯ ಗಾದೆಯನ್ನು ಉಲ್ಲೇಖಿಸಿರುವ ಅಂಶ ಯಾವುದೇ ಜಾತಿಯನ್ನು ನಿಂದನೆ ಮಾಡಿದಂತೆ ಎಂಬ ಅರ್ಥವಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ (ಎಸ್‌ಸಿ,ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ಯಾವುದೇ ಅಪರಾಧವನ್ನು ಎಸಗಿಲ್ಲ" ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಉಪೇಂದ್ರ ವಿರುದ್ಧ ಸಮತಾ ಸೈನಿಕ ದಳದ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ಈ ದೂರಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯಡಿ ಬೆಂಗಳೂರಿನ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು FIR ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ:ಆಕ್ಷೇಪಾರ್ಹ ಪದ ಬಳಕೆ ಆರೋಪ: ನಟ ಉಪೇಂದ್ರ ವಿರುದ್ಧ ಮತ್ತೊಂದು ಎಫ್ಐಆರ್

Last Updated : Aug 14, 2023, 3:50 PM IST

ABOUT THE AUTHOR

...view details