ಕರ್ನಾಟಕ

karnataka

ETV Bharat / state

ಟ್ವಿಟರ್ ಖಾತೆಗಳಿಗೆ ನಿರ್ಬಂಧ: ನಿರ್ಧಾರ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ - ಹೈಕೋರ್ಟ್​ನಲ್ಲಿ ಟ್ವಿಟರ್ ಪ್ರಕರಣ

ಟ್ವಿಟರ್ ಖಾತೆಗಳ ನಿರ್ಬಂಧ ಆದೇಶ ಸಂಬಂಧ ಸಂವಿಧಾನದ ಅಡಿಯಲ್ಲಿ ಟ್ವಿಟರ್ ಪರಿಹಾರ ಪಡೆಯಲು ಅರ್ಹವಾಗಿಲ್ಲ ಎಂದು ಹೈಕೋರ್ಟ್​ಗೆ ಕೇಂದ್ರ ಸರ್ಕಾರ ತಿಳಿಸಿದೆ.

Twitter
ಟ್ವಿಟರ್

By

Published : Mar 17, 2023, 10:12 AM IST

ಬೆಂಗಳೂರು: ಸಂವಿಧಾನದ ಪರಿಚ್ಛೇದ 19(ವಾಕ್ ಸ್ವಾತಂತ್ರ್ಯ) ಭಾರತೀಯರಿಗೆ ಮಾತ್ರ ಅನ್ವಯವಾಗಲಿದ್ದು, ಅಮೆರಿಕ ಮೂಲದ ಟ್ವಿಟರ್ ಸಂಸ್ಥೆ ಈ ಪರಿಚ್ಚೇದದ ಅಡಿ ಪರಿಹಾರ ಕೋರಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್​​ಗೆ ತಿಳಿಸಿದೆ. ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ, ಸಂವಿಧಾನದ ಅಡಿಯಲ್ಲಿ ಟ್ವಿಟರ್ ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆರ್‌.ಶಂಕರನಾರಾಯಣನ್‌, ಟ್ವಿಟರ್‌ ವಿದೇಶಿ ಕಾರ್ಪೊರೇಟ್‌ ಸಂಸ್ಥೆಯಾಗಿರುವುದರಿಂದ ಸಂವಿಧಾನದ 19ನೇ(ವಾಕ್ ಸ್ವಾತಂತ್ರ್ಯ) ವಿಧಿಯಡಿ ಪರಿಹಾರ ಪಡೆಯಲು ಅರ್ಹವಾಗಿಲ್ಲ. 14ನೇ (ಸಮಾನತೆ)ವಿಧಿಯಡಿ ಯಾವುದೇ ಸ್ವೇಚ್ಛಾಚಾರ ನಡೆದಿಲ್ಲ ಮತ್ತು ಮಾಹಿತಿ ತಂತ್ರಜ್ಞಾನ ನಿಯಮ 69 (ಎ) ಅನ್ನು ಸೂಕ್ತವಾದ ರೀತಿಯಲ್ಲಿ ಪಾಲಿಸಲಾಗಿದೆ. ಟ್ವಿಟರ್‌ ಖಾತೆ ಹೊಂದಿರುವವರಿಗೆ ನೋಟಿಸ್‌ ನೀಡದಿರುವುದು ಇಡೀ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದಿಲ್ಲ. ಹೀಗಾಗಿ, ಯಾವುದೇ ರೀತಿಯ ಪರಿಹಾರ ಪಡೆಯಲು ಟ್ವಿಟರ್‌ ಅರ್ಹವಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿ ಟ್ವಿಟರ್‌ ಪ್ರಮುಖ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವಾಗಿದ್ದು, ನಿಯಮ 4ರ ಪ್ರಕಾರ ಹೆಚ್ಚುವರಿ ಕಾರ್ಯತತ್ಪರತೆ ತೋರಬೇಕಿದೆ. ಖಾತೆದಾರರ ಮಾಹಿತಿ ಒದಗಿಸುವುದು ಮಧ್ಯಸ್ಥಿಕೆದಾರರ ಕರ್ತವ್ಯವಾಗಿದೆ. ಸರ್ಕಾರದ ನೋಟಿಸ್‌ಗಳಿಗೆ ಟ್ವಿಟರ್‌ ಪ್ರತಿಕ್ರಿಯಿಸಿಲ್ಲ. ಈ ಮಧ್ಯೆ, ದುಷ್ಕರ್ಮಿಗಳು ಪ್ರಚೋದನಕಾರಿ ಮಾಹಿತಿ ಹಾಕುವುದನ್ನು ಮುಂದುವರಿಸಿದ್ದಾರೆ ಎಂದು ವಾದ ಮಂಡಿಸಿದರು.

ಭಾರತ ಆಕ್ರಮಿತ ಕಾಶ್ಮೀರದ ಕುರಿತು ಯಾರೋ ಒಬ್ಬರು ಊಹಾತ್ಮಕವಾದ ಪಾಕಿಸ್ತಾನ ಸರ್ಕಾರದ ಹೆಸರಿನಲ್ಲಿ ಟ್ವೀಟ್‌ ಮಾಡುತ್ತಾರೆ. ಮತ್ತಾರೋ ಪ್ರಭಾಕರ್‌ (ಹತರಾದ ಎಲ್‌ಟಿಟಿಇ ಮುಖಂಡ) ಅವರು ಮರಳಿ ಬರುತ್ತಿದ್ದಾರೆ ಎನ್ನುತ್ತಾರೆ. ಇದೆಲ್ಲವೂ ಅಪಾಯಕಾರಿಯಾಗಿದ್ದು, ಗಲಭೆ ಸೃಷ್ಟಿಸಬಹುದು. ಇದರ ಮೇಲೆ ನಿಗಾ ಇಡುವುದು ಸರ್ಕಾರಕ್ಕೆ ಕಷ್ಟವಾಗಿದ್ದು, ಅದಕ್ಕೆ ಬೆಂಬಲಬೇಕಿದೆ ಎಂದು ವಾದ ಪೂರ್ಣಗೊಳಿಸಿದರು. ಇದಕ್ಕೆ ಪ್ರತಿಯಾಗಿ ಟ್ವಿಟ್ಟರ್ ವಾದ ಮಂಡಿಸಬೇಕಾಗಿದ್ದು, ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಿತು.

ಈ ಹಿಂದೆ ನಡೆದ ವಿಚರಣೆ ವೇಳೆ, ಸರ್ಕಾರ ಸ್ವೇಚ್ಛೆಯಿಂದ ನಡೆದುಕೊಂಡರೆ ಮಾತ್ರ ಸಂವಿಧಾನದ 14ನೇ ವಿಧಿ ಅಡಿ ನೀಡಲಾದ ಹಕ್ಕು ಉಲ್ಲಂಘನೆ ಉಲ್ಲೇಖಿಸಿ ಟ್ವಿಟರ್‌ ನ್ಯಾಯಾಲಯದ ಕದ ತಟ್ಟಬಹುದು. ಟ್ವಿಟರ್‌ ತನ್ನ ಖಾತೆದಾರರ ಪರವಾಗಿ ವಾದಿಸಲಾಗದು. ಹೀಗಾಗಿ, 39 ಯುಆರ್‌ಎಲ್‌ಗಳನ್ನು ತೆಗೆಯುವಂತೆ ಕೇಂದ್ರ ಸರ್ಕಾರವು ಹತ್ತು ನಿರ್ಬಂಧ ಆದೇಶ ಮಾಡಿರುವುದನ್ನು ಪ್ರಶ್ನಿಸಲು ಟ್ವಿಟರ್​​ಗೆ ಹಕ್ಕಿಲ್ಲ. ಬಳಕೆದಾರರ ಪರವಾಗಿ ಸಮರ್ಥಿಸುವ ಹಕ್ಕನ್ನು ಹೊಂದಿಲ್ಲ. ಹೀಗೆ ಮಾಡಲು ಶಾಸನದ ಬೆಂಬಲ ಅಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಅಲ್ಲದೆ, ಈ ಪ್ರಕರಣದಲ್ಲಿ ಖಾತೆಗಳ ನಿರ್ಬಂಧದಿಂದ ಟ್ವಿಟರ್ ಬಾಧಿತ ಪಕ್ಷಕಾರನೇ.? ಎಲ್ಲ ಬಳಕೆದಾರರನ್ನು ಅದು ಬೆಂಬಲಿಸುತ್ತದೆಯೇ? ಟ್ವಿಟರ್‌ ಮತ್ತು ಅದರ ಬಳಕೆದಾರರ ನಡುವೆ ಯಾವುದೇ ಸದಸ್ಯತ್ವ ಅಥವಾ ಸಂಬಂಧದ ಪ್ರಶ್ನೆ ಉದ್ಭವಿಸುವುದಿಲ್ಲ. ಟ್ವಿಟರ್‌ ಕೇವಲ ವೇದಿಕೆ ಸೃಷ್ಟಿಸಿದ್ದು, ಅಲ್ಲಿ ಯಾರು ಬೇಕಾದರೂ ಸೇರ್ಪಡೆಯಾಗಬಹುದು. ಖಾತೆದಾರರು ಯಾವುದೇ ಉದ್ಯಮ ನಡೆಸುವುದಿಲ್ಲ. ಅವರು ಅಭಿವ್ಯಕ್ತಿಸಬಹುದಷ್ಟೇ. ಆದರೆ, ಭಾರತದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದ್ದಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಬಹುದು. ಈ ವಿಚಾರದಲ್ಲಿ ಮಧ್ಯಸ್ಥವೇದಿಕೆ (ಟ್ವಿಟರ್) ಅಂತರ ಕಾಯ್ದುಕೊಳ್ಳಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಇದನ್ನೂ ಓದಿ: ಎಸ್​ಐಎಫ್ಎಫ್ ಸದಸ್ಯರಿಂದ ಎಲಾನ್ ಮಸ್ಕ್ ಫೋಟೋಗೆ ಪೂಜೆ.. ಏಕೆ ಗೊತ್ತಾ?

ABOUT THE AUTHOR

...view details