ಬೆಂಗಳೂರು :ಹಲವು ವರ್ಷಗಳಿಂದ ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರ ಹುದ್ದೆಗಳನ್ನ ಶೀಘ್ರ ಭರ್ತಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಸುಮಾರು 2 ಸಾವಿರ ಹುದ್ದೆ ಖಾಲಿ ಇವೆ. ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.
ಮುಖ್ಯಮಂತ್ರಿ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಆದಷ್ಟು ಶೀಘ್ರ ಭರ್ತಿ ಮಾಡಿಕೊಳ್ಳಲಾಗುವುದು. ಕಳೆದ ಹಲವು ವರ್ಷಗಳಿಂದಲೂ ಇಲಾಖೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡದ ಪರಿಣಾಮ ಈ ಸಮಸ್ಯೆ ಉದ್ಭವವಾಗಿದೆ ಎಂದರು.
ಇದಕ್ಕೂ ಮುನ್ನ ಶಾಸಕ ಅರಗ ಜ್ಞಾನೇಂದ್ರ ಅವರು, ಅನೇಕ ವರ್ಷಗಳಿಂದ ಪಶುಸಂಗೋಪನಾ ಇಲಾಖೆಯಲ್ಲಿ ಅನೇಕ ಹುದ್ದೆ ಭರ್ತಿ ಮಾಡದ ಪರಿಣಾಮ ಆಸ್ಪತ್ರೆಗಳಲ್ಲಿ ಜಾನುವಾರುಗಳು ಕಾಯಿಲೆಗೆ ತುತ್ತಾಗಿದ್ದರೆ, ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಕಾಲುಬಾಯಿ ಜ್ವರ, ನಾಯಿ ಕಡಿತವಾದ್ರೆ ಚಿಕಿತ್ಸೆ ಕೊಡುವವರು ಯಾರು? ಮೊದಲು ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿದರು.
ಮಾತೃ ಇಲಾಖೆ :ಇಲಾಖೆಯಿಂದ ನೇಮಕಗೊಂಡು ಬೇರೊಂದು ಇಲಾಖೆಗೆ ನಿಯೋಜನೆಗೊಳ್ಳುವ ಅಧಿಕಾರಿಗಳನ್ನು ಪುನಃ ಮಾತೃ ಇಲಾಖೆಗೆ ಕರೆಸಿಕೊಳ್ಳಲು ಕ್ರಮಕೈಗೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.