ಬೆಂಗಳೂರು: ತುಮಕೂರು ನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 250 ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವಂತೆ ಹೈಕೋರ್ಟ್‌ನ ಏಕ ಸದಸ್ಯಪೀಠ ನೀಡಿದ್ದ ಆದೇಶಕ್ಕೆ, ವಿಭಾಗೀಯ ಪೀಠ ತಡೆಯಾಜ್ಞೆ ನೀಡಿ ಆದೇಶಿಸಿದೆ. ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ವಿಚಾರಣೆ ಸಂದರ್ಭದಲ್ಲಿ ತುಮಕೂರು ಪಾಲಿಕೆ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯ, ತುಮಕೂರು ಪೌರ ಕಾರ್ಮಿಕರ ಸಂಘ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. ಅಲ್ಲದೆ, ಏಕ ಸದಸ್ಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ತುಮಕೂರಿನಲ್ಲಿ 3.55 ಲಕ್ಷ ಜನರಿದ್ದು, 507 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ, ಸರ್ಕಾರ 254 ಹುದ್ದೆಗಳಿಗೆ ಮಂಜೂರು ಮಾಡಿದ್ದರೆ, ಕೇವಲ 112 ಪೌರಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಈ ಮೇಲ್ಮನವಿ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಈ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಇದೇ ಸಂದರ್ಭದಲ್ಲಿ ಮುಂದಿನ ಆದೇಶದವರೆಗೆ ಏಕಸದಸ್ಯಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿತು.
ಏಕ ಸದಸ್ಯಪೀಠದ ಆದೇಶವೇನು?: ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ. ಕಳೆದ ಡಿಸೆಂಬರ್ನಲ್ಲಿ ಮುಂದಿನ ಮೂರು ತಿಂಗಳಲ್ಲಿ ತುಮಕೂರು ನಗರ ಪಾಲಿಕೆಯು (ಹಿಂದಿನ ನಗರಸಭೆ)ಯ 250 ಪೌರ ಕಾರ್ಮಿಕರ ಸೇವೆಯನ್ನು ಅವರು ಕೆಲಸಕ್ಕೆ ಸೇರಿದ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಕಾಯಂಗೊಳಿಸಬೇಕು. ಅವರ ಕೆಲಸಕ್ಕೆ ಸಮಾನ ವೇತನ ಹಾಗೂ ಹಿಂಬಾಕಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆ ಮೂಲಕ ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಅಂತ್ಯ ಹಾಡಿದೆ.