ಕರ್ನಾಟಕ

karnataka

ETV Bharat / state

ಸಾಕ್ಷ್ಯ ಹೇಳುವ ಕಾರಣಕ್ಕೆ ಜೈಲಲ್ಲೇ ಕುಳಿತು ಕೊಲೆಗೆ ಸಂಚು: ಆರೋಪಿಗಳ ಬಂಧನ - murder video

ರೌಡಿಶೀಟರ್​ವೊಬ್ಬ ಜೈಲಿನಲ್ಲೇ ಇದ್ದುಕೊಂಡು ವ್ಯಕ್ತಿಯ ಕೊಲೆಗೆ ಸ್ಕೆಚ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

two accused arrested in bengaluru for murder case
ಆರೋಪಿಗಳ ಬಂಧನ

By

Published : Aug 25, 2021, 6:49 AM IST

ಬೆಂಗಳೂರು: ರೌಡಿಶೀಟರ್ ಒಬ್ಬ ಜೈಲಿನಲ್ಲೇ ಕುಳಿತು ತನ್ನ ಎದುರಾಳಿಯ ಹತ್ಯೆಗೆ ಸಂಚು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳುತ್ತಾನೆ ಎಂದು ನಾರಾಯಣಸ್ವಾಮಿ ಎಂಬುವರ ಹತ್ಯೆಗೆ ರೌಡಿಶೀಟರ್ ಸುಂದರೇಶ್ ಜೈಲಿಂದಲೇ ಯೋಜನೆ ರೂಪಿಸಿದ್ದ.

ನಾರಾಯಣಸ್ವಾಮಿಯನ್ನು ಹತ್ಯೆ ಮಾಡಲು ಸುಂದರೇಶ್​ನ ಸಹಚರರಾದ ಮುನಿರಾಜು ಮತ್ತು ವೆಂಕಟೇಶ ಅಲಿಯಾಸ್ ಚಿಕ್ಕ ಹೊಸಕೋಟೆಯ ತಂಡ ಡೀಲ್ ಕೂಡಾ ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ:

ಜುಲೈ 31 ರಂದು ಬೈಯ್ಯಪ್ಪನಹಳ್ಳಿಯ ಸುರಂಜನಾದಾಸ್ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ನಾರಾಯಣಸ್ವಾಮಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಯತ್ನ ನಡೆಸಿದ್ದರು.

ಕೊಲೆ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದುಷ್ಕರ್ಮಿಗಳು ಲಾಂಗ್​ನಿಂದ ಹಲ್ಲೆ ಮಾಡಲು ಪ್ರಯತ್ನಿಸಿದಾಗ ರಸ್ತೆ ವಿಭಜಕ ದಾಟಿ ನಾರಾಯಣಸ್ವಾಮಿ ಜೀವ ಉಳಿಸಿಕೊಂಡಿದ್ದರು. ಈ ಕುರಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬೈಯಪ್ಪನಹಳ್ಳಿ ಪೊಲೀಸರು ಇಬ್ಬರು ಆರೋಪಿಗಳಾದ ಮುನಿರಾಜು ಮತ್ತು ವೆಂಕಟೇಶ್ ಎಂಬುವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಸತ್ಯಾಂಶ ಗೊತ್ತಾಗಿದೆ. ಜೈಲಿನಲ್ಲಿದ್ದುಕೊಂಡೇ ರೌಡಿ ಸುಂದರೇಶ್​, ನಾರಾಯಣಸ್ವಾಮಿ ಹತ್ಯೆಗೆ ಸುಪಾರಿ‌ ನೀಡಿದ್ದ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸದಂತೆ ಸುಂದರೇಶ್​ನನ್ನು ಬಾಡಿವಾರೆಂಟ್ ಮೂಲಕ ಬೈಯ್ಯಪ್ಪನಹಳ್ಳಿ ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಯತ್ನದ ಕುರಿತು ಸುಂದರೇಶ್ ಬಾಯ್ಬಿಟ್ಟಿದ್ದಾನೆ.

2017ರಲ್ಲಿ ನಾಗಾವಾರಪಾಳ್ಯದ ಬಳಿ ಶಿವಕುಮಾರ್ ಎಂಬಾತನನ್ನು ಸುಂದರೇಶ್ ಸಹಚರರು ಕೊಲೆ ಮಾಡಿದ್ದರು. ಕೊಲೆಯಾದ ಶಿವಕುಮಾರ್ ನಾರಾಯಣಸ್ವಾಮಿಯ ಮೈದುನ. ಈ ಕಾರಣಕ್ಕೆ ಕೊಲೆ ಸಂಬಂಧ ಸಾಕ್ಷಿ ಹೇಳುವುದಾಗಿ ನಾರಾಯಣಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು. ನಾರಾಯಣಸ್ವಾಮಿ ಸಾಕ್ಷಿ ಹೇಳುತ್ತಾರೆ ಎನ್ನುವ ಕಾರಣಕ್ಕೆ ಇದೀಗ ಕೊಲೆಗೆ ಸ್ಕೆಚ್ ಹಾಕಿದ್ದ. ಈ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details