ಕರ್ನಾಟಕ

karnataka

ETV Bharat / state

LIVE UPDATE: ರಾಜ್ಯಾದ್ಯಂತ ಸಾರಿಗೆ ನೌಕರರ ಬೃಹತ್ ಪ್ರತಿಭಟನೆ: ಕೆಲವೆಡೆ ಬಸ್ ಸಂಚಾರದಲ್ಲಿ ವ್ಯತ್ಯಯ

state Transport workers protest
state Transport workers protest

By

Published : Dec 11, 2020, 8:45 AM IST

Updated : Dec 11, 2020, 5:50 PM IST

17:42 December 11

ಕೊಡಗು: ನಿಲ್ದಾಣದಲ್ಲೇ ಅಡುಗೆ ಮಾಡಿದ ಸಾರಿಗೆ ಸಿಬ್ಬಂದಿ

ಕೊಡಗು: ನಿಲ್ದಾಣದಲ್ಲೇ ಅಡುಗೆ ಮಾಡಿದ ಸಾರಿಗೆ ಸಿಬ್ಬಂದಿ

ಕೊಡಗು:ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಕೆಎಸ್‍ಆರ್​ಟಿಸಿ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಮಡಿಕೇರಿಯಲ್ಲೂ ಸಾರಿಗೆ ಬಸ್​ ಸಂಚಾರ ಸಂಪೂರ್ಣ ಸ್ಥಬ್ಧವಾಗಿತ್ತು.

ಬೆಳಿಗ್ಗೆ ಏಳುಗಂಟೆಯಿಂದಲೇ ಪ್ರತಿಭಟನೆ ಆರಂಭಿಸಿದ ನಾಲ್ಕು ನೂರಕ್ಕೂ ಹೆಚ್ಚು ನೌಕರರು ಒಂದೇ ಒಂದೂ ಬಸ್ಸನ್ನು ನಿಲ್ದಾಣದಿಂದ ಹೊರ ಬಿಟ್ಟಿಲ್ಲ. ಹೊರ ಜಿಲ್ಲೆಯಿಂದ ಮಡಿಕೇರಿ ಮೂಲಕ ಮತ್ತೊಂದು ಜಿಲ್ಲೆಗೆ ಹೋಗಲು ಬಂದಿದ್ದ ಪ್ರಯಾಣಿಕರನ್ನು ಇಳಿಸಿ ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲಾಗದೆ ಪರದಾಡಿದ್ರು‌. ಮಧ್ಯಾಹ್ನದ ಬಳಿಕ ಬಸ್ ನಿಲ್ದಾಣದಲ್ಲಿಯೇ ಅಡುಗೆ ಮಾಡಲು ಆರಂಭಿಸಿ ಪ್ರತಿಭಟನಾಕಾರರು ಅಲ್ಲಿಯೇ ಊಟ ಮಾಡಿದ್ರು. ನಿಲ್ದಾಣದ ಒಳಗೆ ಉರುಳು ಸೇವೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

17:31 December 11

ಕೋಲಾರದಲ್ಲಿ ಸಾರಿಗೆ ಸಂಚಾರ ಬಂದ್

ಕೋಲಾರದಲ್ಲಿ ಸಾರಿಗೆ ಸಂಚಾರ ಬಂದ್

ಕೋಲಾರ:ಸಾರಿಗೆ ಸಂಸ್ಥೆ ನೌಕರರು ಕರೆ ನೀಡಿದ್ದ ಮುಷ್ಕರಕ್ಕೆ ಕೋಲಾರದಲ್ಲೂ ಬೆಂಬಲ ವ್ಯಕ್ತವಾಗಿದೆ.

ಬೆಳಗ್ಗೆ ಬಂಗಾರಪೇಟೆ ಪಟ್ಟಣದ ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಮೂರು ಸರ್ಕಾರಿ ಬಸ್​ಗಳ ಮೇಲೆ ಬೈಕ್​ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದು, ಬಸ್​ನ ಮುಂಭಾಗದ ಗಾಜುಗಳಿಗೆ ಹಾನಿಯಾಗಿದೆ. ಉಳಿದಂತೆ ಕೋಲಾರದಲ್ಲಿ ಮುಂಜಾನೆ ಎರಡು ಮೂರು ಗಂಟೆಗಳ ಕಾಲ ಬಸ್​ಗಳು ಸಂಚಾರ ನಡೆಸಿದವು. ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಬಸ್ ಸಂಚಾರ ನಿಲ್ಲಿಸಲಾಯಿತು. ಇದರಿಂದಾಗಿ ಸರ್ಕಾರಿ ಬಸ್​ ನಿಲ್ದಾಣ ಪ್ರಯಾಣಿಕರು, ಬಸ್​ಗಳಿಲ್ಲದೆ ಬಿಕೋ ಎನ್ನುತ್ತಿದೆ. 

16:07 December 11

ಬೆಳಗಾವಿಯಲ್ಲಿ ಸಾರಿಗೆ ಸಚಿವರ ವಿರುದ್ಧ ಘೋಷಣೆ

ಬೆಳಗಾವಿಯಲ್ಲಿ ಸಾರಿಗೆ ಸಚಿವರ ವಿರುದ್ಧ ಘೋಷಣೆ

ಬೆಳಗಾವಿ:ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ತವರು ಜಿಲ್ಲೆ ಬೆಳಗಾವಿಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ ತೀವ್ರಗೊಂಡಿದೆ.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ಸಿಬ್ಬಂದಿಗೆ ರೈತ ಹಾಗೂ ಕನ್ನಡ ಪರ ಸಂಘಟನೆ ಮುಖಂಡರು ಸಾಥ್ ನೀಡಿದ್ದಾರೆ. ಪ್ರತಿಭಟನೆ ವೇಳೆ ಸಾರಿಗೆ ಸಚಿವರ ವಿರುದ್ಧ ದಿಕ್ಕಾರ ಕೂಗಿದ ಆಕ್ರೋಶ ವ್ಯಕ್ತಪಡಿಸಿದ್ರು.

15:50 December 11

ಚಾಮರಾಜನಗರ ಡಿಪೋ ಬಳಿ ನೌಕರರ ಪ್ರತಿಭಟನೆ

ಚಾಮರಾಜನಗರ ಡಿಪೋ ಬಳಿ ನೌಕರರ ಪ್ರತಿಭಟನೆ

ಚಾಮರಾಜನಗರ:ಬೆಳಗ್ಗೆಯಿಂದ ಎಂದಿನಂತಿದ್ದ ಸಾರಿಗೆ ಸಂಚಾರ ಮಧ್ಯಾಹ್ನದ ಬಳಿಕ ಸ್ತಬ್ಧವಾಗಿದ್ದು, ಸಾರಿಗೆ ಸಂಸ್ಥೆ ನೌಕರರು ಚಾಮರಾಜನಗರ ಡಿಪೋ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೆ.

20 ಕ್ಕೂ ಹೆಚ್ಚು ಬಸ್​ಗಳನ್ನು ತಡೆದಿರುವ ಪ್ರತಿಭಟನಾಕಾರರು ಕರ್ತವ್ಯ ನಡೆಸುತ್ತಿದ್ದವರನ್ನು ತಮ್ಮ ಹೋರಾಟಕ್ಕೆ ಸೇರಿಸಿಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಗುಂಡ್ಲುಪೇಟೆಯಲ್ಲೂ ಸಂಚಾರ ಬಂದ್ದಾಗಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ವೇಳೆ ಶೇ.60 ರಷ್ಟು ಬಸ್ ಸಂಚಾರ ಆರಂಭವಾಗಿತ್ತು. ಆದರೆ, ಒಕ್ಕೂಟದ ಮನವಿ ಮೇರೆಗೆ ಮಧ್ಯಾಹ್ನದ ವೇಳೆಗೆ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟಿಸಲು ಆರಂಭಿಸಿದ್ದಾರೆ.

15:29 December 11

ಶಿವಮೊಗ್ಗದಲ್ಲಿ ಬಸ್​ ಮೇಲೆ ಕಲ್ಲು ತೂರಾಟ

ಶಿವಮೊಗ್ಗದಲ್ಲಿ ಬಸ್​ ಮೇಲೆ ಕಲ್ಲು ತೂರಾಟ

ಶಿವಮೊಗ್ಗ: ನಗರದ ಹೊರ ವಲಯದ ಮಾಚೇನಹಳ್ಳಿ ಬಳಿ ಬಸ್​ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬಸ್​ನ ಕಿಟಕಿಯ ಗಾಜು ಪುಡಿಪುಡಿಯಾಗಿದೆ.

ಸಾರಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಇಂದು ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದರು. ಹಾಗಾಗಿ ಶಿವಮೊಗ್ಗ ದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಭದ್ರಾವತಿ ಮತ್ತು ಶಿವಮೊಗ್ಗ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್​ ಮೇಲೆ ಕೆಲ ಕಿಡಿಗೇರಿಗಳು ಕಲ್ಲು ತೂರಾಟ ನಡೆಸಿದ್ದಾರೆ.

15:18 December 11

ಕೆಎಸ್​ಆರ್​ಟಿಸಿ ಅಂದ್ರೆ ನರಕಯಾತನೆ: ಸಿಬ್ಬಂದಿ ಆಳಲು

ಕೆಎಸ್​ಆರ್​ಟಿಸಿ ಅಂದ್ರೆ ನರಕಯಾತನೆ: ಸಿಬ್ಬಂದಿ ಆಳಲು

ರಾಯಚೂರು: ಕೆಎಸ್​ಆರ್​ಟಿಸಿ ಅಂದ್ರೆ ನರಕಯಾತನೆ ಎಂದು ನೌಕರರೊಬ್ಬರು ಹಿರಿಯ ಅಧಿಕಾರಿಯ ಮುಂದೆ ತನ್ನ ಆಳಲು ತೋಡಿಕೊಂಡಿರುವ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ.

ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಬಂದ ರಾಯಚೂರು ಸಾರಿಗೆ ಇಲಾಖೆಯ ಜಿಲ್ಲಾಧಿಕಾರಿ ವೆಂಕಟೇಶ್ ಪ್ರತಿಭಟನಾಕಾರರ ಮನವೋಲಿಸಲು ಮುಂದಾಗಿದ್ರು. ಈ ವೇಳೆ ಎದ್ದುನಿಂತು ಮಾತನಾಡಿದ ಸಾರಿಗೆ ನೌಕರ ಈ ಇಲಾಖೆಗೆ ಬರಬಾರದಿತ್ತು, ಬಂದು ದೊಡ್ಡ ತಪ್ಪಾಗಿದೆ. ಈ ಇಲಾಖೆಯಲ್ಲಿ ಕೆಲಸ ಮಾಡುವದಕ್ಕೆ ಉತ್ತಮ ವಾತಾವರಣವಿಲ್ಲ. ಬದಲಾಗಿ ನಿತ್ಯ ನರಕಯಾತನೆ ಅನುಭವಿಸುವಂತೆ ಆಗಿದೆ ಎಂದು ಆಳಲು ತೋಡಿಕೊಂಡಿದ್ದಾರೆ. ನಾವು ಹೋರಾಟ ಮಾಡುತ್ತಿರುವುದು ನಿಮ್ಮ ವಿರುದ್ದವಲ್ಲ, ಸರ್ಕಾರ ವಿರುದ್ದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಸ್ಪಂದಿಸುವಂತೆ ಅಧಿಕಾರಿಗೆ ಮನವಿ ಮಾಡಿದ್ದಾರೆ.

15:08 December 11

ಬಾಗಲಕೋಟೆಯಲ್ಲಿ ಸಾರಿಗೆ ನೌಕರರ ಮುಷ್ಕರ

ಬಾಗಲಕೋಟೆಯಲ್ಲಿ ಸಾರಿಗೆ ನೌಕರರ ಮುಷ್ಕರ

ಬಾಗಲಕೋಟೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಮುಷ್ಕರಕ್ಕೆ ಬಾಗಲಕೋಟೆ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಗಿದೆ. 

ಸಾರಿಗೆ ಬಸ್​ಗಳ ಸಂಚಾರವಿಲ್ಲದೆ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದ್ದು, ಬಾಗಲಕೋಟೆ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕೆಎಸ್​ಆರ್​ಟಿಸಿ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.

14:01 December 11

ಮುಷ್ಕರದ ನಡುವೆಯೂ ಮಾನವೀಯತೆ ಮೆರೆದ ಸಿಬ್ಬಂದಿ

ಮಾನವೀಯತೆ ಮೆರೆದ ಸಿಬ್ಬಂದಿ

ಚಿಕ್ಕಮಗಳೂರು: ಮುಷ್ಕರದ ನಡುವೆಯೂ ಕೆಎಸ್ಆರ್​ಟಿಸಿ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬಂದಿದೆ.

ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ತುಮಕೂರು ಮೂಲದ ಮಹಿಳೆಯೊಬ್ಬರು ಪುಟ್ಟ ಮಗುವಿನೊಂದಿಗೆ ಸಹೋದರನ ದಾರಿ ಕಾಯುತ್ತಾ ಬಸ್ ನಿಲ್ದಾಣದ ಆವರಣದಲ್ಲಿ ಕುಳಿತಿದ್ದರು. ಹಸಿವಿನಿಂದಾಗಿ ತಾಯಿ, ಮಗು ಇಬ್ಬರು ನಿತ್ರಾಣಗೊಂಡಿರುವುದನ್ನು ಗಮನಿಸಿದ ಸಿಬ್ಬಂದಿ ಪ್ರತಿಭಟನೆ ಮಧ್ಯೆಯೂ ಮಹಿಳೆ ಹಾಗೂ ಮಗುವಿಗೆ ಉಪಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

12:53 December 11

ಬಿಕೋ ಎನ್ನುತ್ತಿರುವ ಮೆಜೆಸ್ಟಿಕ್

ಮೆಜೆಸ್ಟಿಕ್ ನಿಲ್ದಾಣ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಬಂದ್​ ಹಿನ್ನೆಲೆ ನಗರದ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ನಿಲ್ದಾಣ ಬಿಕೋ ಎನ್ನುತಿದೆ. ಬೇರೆ ಬೇರೆ ಜಿಲ್ಲೆಗಳಿಂದ ನಗರದಕ್ಕೆ ಆಗಮಿಸಿದ ಪ್ರಯಾಣಿಕರು ವಾಪಸ್​ ಉರಿಗೆ ತೆರಳಲು ಬಸ್ಸುಗಳಿಲ್ಲದೆ ಪರದಾಡುತ್ತಿದ್ದಾರೆ. ಆಟೋ ಚಾಲಕರು ದುಬಾರಿ ಹಣ ಕೇಳುತ್ತಿದ್ದಾರೆ.

12:28 December 11

ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ:

ಗದಗ: ಸಾರಿಗೆ ನೌಕರರ ಮುಷ್ಕರದ ಲಾಭ ಪಡೆದ ಖಾಸಗಿ ವಾಹನ, ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿಗೆ ಮುಂದಾಗಿದ್ದಾರೆ. ಆಟೋ ಚಾಲಕರು 10 ಕಿಲೋ ಮೀಟರ್ ಹೋಗಲು 200 ರೂಪಾಯಿ ಕೇಳುತ್ತಿದ್ದು, ಕ್ರೂಸರ್ ವಾಹನಗಳ ಚಾಲಕರು ಎರಡು ಪಟ್ಟು ಹಣ ಪಡೆದುಕೊಳ್ಳುತ್ತಿದ್ದಾರೆ‌. ಖಾಸಗಿ ವಾಹನಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದು, ಬಸ್ ಬಂದ್ ಕುರಿತು ಮೊದಲೇ ಯಾಕೆ ಮಾಹಿತಿ ನೀಡಿಲ್ಲ ಎಂದು ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿ ಬಳಿ ಪ್ರಯಾಣಿಕರು ಜಮಾಯಿಸಿ, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

12:27 December 11

ಶಿವಮೊಗ್ಗದಲ್ಲಿ ಬಂದ್​ಗೆ ಉತ್ತಮ ಬೆಂಬಲ

ಶಿವಮೊಗ್ಗ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸಾರಿಗೆ ನೌಕರರಿಗೆ ಮೂವತ್ತು ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ಶಿವಮೊಗ್ಗದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇಂದು ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಬಂದ್​ ಆಗಿದ್ದು, ಹೊರ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.

12:10 December 11

ಸಾರಿಗೆ ನೌಕರರ ಪ್ರತಿಭಟನೆ

ರಾಜ್ಯಾದಂತ ಸಾರಿಗೆ ನೌಕರರ ಮುಷ್ಕರ

ರಾಯಚೂರು:  ಸಾರಿಗೆ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಮುಷ್ಕರಕ್ಕೆ ರಾಯಚೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

12:09 December 11

ಹಣ ವಸೂಲಿಗೆ ಮುಂದಾದ ಆಟೋ ಚಾಲಕರು

ರಾಜ್ಯಾದಂತ ಸಾರಿಗೆ ನೌಕರರ ಮುಷ್ಕರ

ಬೆಂಗಳೂರು: ಬಿಎಂಟಿಸಿ ಹಾಗೂ  ಕೆಎಸ್​ಆರ್​ಟಿಸಿ ಬಸ್​ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನಲೆ ‌‌ಪ್ರಯಾಣಿಕರಿಂದ ಹೆಚ್ಚಿಗೆ ಹಣವನ್ನು ಆಟೋ ಹಾಗೂ ಖಾಸಗಿ ಬಸ್‌ ಕಂಡಕ್ಟರ್​ಗಳು ವಸೂಲಿ‌ ಮಾಡುತ್ತಿದ್ದಾರೆ. ಬಿಎಂಟಿಸಿ ಬಸ್​ ವ್ಯವಸ್ಥೆ ಇಲ್ಲದ ಕಾರಣ ಕೆಲವರು ಖಾಸಗಿ ಬಸ್​ ಹಾಗೂ ಆಟೋಗಳ ‌ಮೊರೆ ಹೋಗಿದ್ದಾರೆ. ಹೀಗಾಗಿ 20 ರೂ. ತೆಗೆದುಕೊಳ್ಳುವ ಜಾಗದಲ್ಲಿ 40 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

11:49 December 11

ಬಸ್ ಹತ್ತಲು ಮುಗಿಬಿದ್ದ ಪ್ರಯಾಣಿಕರು:

ಬಸ್ ಹತ್ತಲು ಮುಗಿಬಿದ್ದ ಪ್ರಯಾಣಿಕರು

ಮೈಸೂರು:  ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಮೈಸೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಒಂದೆರಡು ಬಸ್​ಗಳು ಮಾತ್ರ ಓಡಾಟ ನಡೆಸುತ್ತಿದ್ದು, ಬಸ್  ಹತ್ತಲು ಪ್ರಯಾಣಿಕರು ಮುಗಿಬೀಳುತ್ತಿರುವುದು ಸಾಮಾನ್ಯವಾಗಿತ್ತು. ಗ್ರಾಮಾಂತರ ಪ್ರದೇಶಗಳಿಗೂ ಕೂಡ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಧಿಕಾರಗಳ ಮಾತಿಗೆ ಬೆಲೆ ಕೊಡದ ಸಾರಿಗೆ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಬೆಂಗಳೂರು ಕಡೆಗೆ ಬೆಳಿಗ್ಗೆಯಿಂದ ಬಸ್ ಸಂಚಾರ ಬಂದ್ ಆಗಿದೆ.

11:48 December 11

ಚಿಕ್ಕೋಡಿಯಲ್ಲಿ ಬಂದ್​ ವಿಫಲ:

ಬಂದ್​ ವಿಫಲ

ಚಿಕ್ಕೋಡಿ: ದಿಢೀರ್ ಬಂದ್​ಗೆ ಕರೆ ನೀಡಿರುವ ಹಿನ್ನೆಲೆ ಚಿಕ್ಕೋಡಿ ಸಾರಿಗೆ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿಲ್ಲ. ಚಿಕ್ಕೋಡಿ ಡಿಪೋ‌ದಿಂದ ಎಂದಿನಂತೆ ಬಸ್​ಗಳು ಸಂಚರಿಸುತ್ತಿವೆ.  

11:35 December 11

ವಿಮಾನ ನಿಲ್ದಾಣಕ್ಕೂ ತಟ್ಟದ ಸಾರಿಗೆ ನೌಕರರ ಮುಷ್ಕರ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಷ್ಕರದ ಬಿಸಿ ತಟ್ಟಿಲ್ಲ. ವಿಮಾನ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಸಂಚರಿಸುವ ಬಿಎಂಟಿಸಿ ಬಸ್​ಗಳು ಎಂದಿನಂತೆ ಸಂಚರಿಸುತ್ತಿವೆ. ಏರ್ ವಿಮಾನ ನಿಲ್ದಾಣದಿಂದ ನಗರದ ಮೆಜೆಸ್ಟಿಕ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಪ್ರಯಾಣ ಬೆಳಸಿವೆ. ಜೊತೆಗೆ ಏರ್​ಪೋರ್ಟ್​ ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚಾರಿಸುವ  ಕೆಎಸ್​ಆರ್​ಟಿಸಿ ಬಸ್​ಗಳು ಸಹ ಸಂಚರಿಸುತ್ತಿವೆ.

11:35 December 11

ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳ ಪರದಾಟ:

ವಿದ್ಯಾರ್ಥಿಗಳ ಪರದಾಟ

ಬೆಳಗಾವಿ: ಬಸ್ ಸಂಚಾರ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಪರದಾಟ ನಡೆಸಿದರು.

ಎಂದಿನಂತೆ ಕಾಲೇಜ್​ಗೆ ತೆರಳಲು ಬೆಳಗ್ಗೆ ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿನಿಯರು ಆಗಮಿಸಿದ್ದರು. ಆದ್ರೆ ಸಾರಿಗೆ ಸಿಬ್ಬಂದಿ ಏಕಾಏಕಿ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಕಳೆದ ಮೂರು ಗಂಟೆಗಳಿಂದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರು ಸೇರಿದಂತೆ ಇತರೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಂದು ಪೂರಕ ಪರೀಕ್ಷೆ ಇದ್ದು, ಆಟೋದವರು 150 ರಿಂದ 200 ರೂ. ಕೇಳುತ್ತಿದ್ದಾರೆ. ಸರ್ಕಾರ ಸಾರಿಗೆ‌ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದರು.

11:17 December 11

ಸಾರಿಗೆ ನೌಕರರ ಮನವೊಲಿಕೆ:

ಸಾರಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಡಿಪೋಗಳಿಂದ ಬಸ್ಸುಗಳ ಓಡಾಟಕ್ಕೆ ಬ್ರೇಕ್​ ಹಾಕಲಾಗಿದೆ. ಪರಿಣಾಮ ಸಾರಿಗೆ ನೌಕರರ ಮನವೊಲಿಕೆಗೆ ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಮುಷ್ಕರ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ನೌಕರರು ಒಪ್ಪದೇ ಇದ್ದರೆ ನೌಕರರ ಮೇಲೆ ಎಸ್ಮಾ ಜಾರಿ ಮಾಡುವ ಸಾಧ್ಯತೆ ಇದೆ.

ಎಸ್ಮಾ ಉಲ್ಲಂಘನೆ ಮಾಡಿದರೆ ವಾರೆಂಟ್ ಇಲ್ಲದೆಯೇ ನೌಕರರನ್ನು ಬಂಧಿಸಬಹುದು. ಎಸ್ಮಾ ಜಾರಿಯಾದ ಮೇಲೆ ಉದ್ಯೋಗಿ ಪ್ರತಿಭಟನೆಯಲ್ಲಿ ಭಾಗಿಯಾದರೆ ವೇತನ ಭತ್ಯೆ ಮತ್ತು ಇತರೆ ಸವಲತ್ತುಗಳ ಮೇಲೆ ಪರಿಣಾಮ ಬೀರಲಿದೆ. ಬಿಎಂಟಿಸಿ‌ಯಲ್ಲಿ ಸುಮಾರು 1,30,000 ಕ್ಕೂ ಅಧಿಕ ಸಾರಿಗೆ ನೌಕರರಿದ್ದು, ಅವರೆಲ್ಲರು ತಮ್ಮ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ.

11:16 December 11

ದಿಢೀರ್ ಬಸ್ ನಿಲ್ಲಿಸಿ ಸಾರಿಗೆ ಸಿಬ್ಬಂದಿ ಪ್ರತಿಭಟನೆ:

ಬೆಳಗಾವಿ: ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ದಿಢೀರ್ ಬಸ್ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಪ್ರತಿಭಟನಾನಿರತ ಸಾರಿಗೆ ಸಿಬ್ಬಂದಿ ಮನವೊಲಿಸಲು ಕೆಎಸ್ಆರ್​ಟಿಸಿ ಡಿಸಿ ಹಾಗೂ ಪೊಲೀಸರು ಮುಂದಾಗಿದ್ದಾರೆ.

11:16 December 11

ಸ್ಥಳದಲ್ಲೇ ಅಡುಗೆ ತಯಾರಿಸಿ ವಿಭಿನ್ನವಾಗಿ ಪ್ರತಿಭಟನೆ:

ವಿಭಿನ್ನ ಪ್ರತಿಭಟನೆ

ಬೆಂಗಳೂರು: ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಆಯಾ ಡಿಪೋಗಳ ಮುಂದೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಹೋರಾಟಗಾರರು ಯಶವಂತಪುರ ಬಸ್ ಡಿಪೋದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ‌‌.

ಪ್ರತಿಭಟನಾ ಸ್ಥಳದಲ್ಲೇ ತಿಂಡಿ ತಯಾರಿಸಲು ಸಜ್ಜಾದ ಸಾರಿಗೆ ನೌಕರರು, ತರಕಾರಿಗಳನ್ನು ತೊಳೆದು ಅಲ್ಲೇ ಅಡಿಗೆ ತಯಾರಿಸುವ ಮೂಲಕ ವಿಭಿನ್ನವಾಗಿ ಮುಷ್ಕರ ನಡೆಸುತ್ತಿದ್ದಾರೆ.

10:39 December 11

ದುಷ್ಕರ್ಮಿಗಳಿಂದ ಕಲ್ಲು ತೂರಾಟ:

ಕಲ್ಲು ತೂರಾಟ

ಕೋಲಾರ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್​ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿನ ಬಸ್ ನಿಲ್ದಾಣದಲ್ಲಿ ಈ ಘಟ‌ನೆ ಜರುಗಿದ್ದು, ಸುಮಾರು ಮೂರು ಬಸ್​ಗಳ ಗಾಜು ಒಡೆಯಲಾಗಿದೆ. ಇಂದು ಮುಂಜಾನೆ ಸುಮಾರು 3.30 ಕ್ಕೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು, ಏಕಾಏಕಿ ಮೂರು ಬಸ್​ಗಳ‌ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕೋಲಾರ, ಮಾಲೂರು ಹಾಗೂ ಕೆಜಿಎಫ್ ಡಿಪೋದ ಬಸ್​ಗಳಿಗೆ ಹಾನಿಯಾಗಿದೆ. ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

10:18 December 11

ಪ್ರಯಾಣಿಕರ ಪರದಾಟ

ಕೊಪ್ಪಳ ಸಾರಿಗೆ ಸಿಬ್ಬಂದಿ ಪ್ರತಿಭಟನೆ

ಕೊಪ್ಪಳ: ಬೆಳಗ್ಗೆ ಸುಮಾರು 8 ಗಂಟೆಯ ವರೆಗೆ ಸಾರಿಗೆ ಸಂಸ್ಥೆ ಬಸ್​ಗಳು ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ಹಾಗೂ ಕುಕನೂರು ಡಿಪೋದಿಂದ ಸಂಚಾರ ನಡೆಸಿದವು. ಬಳಿಕ ಎಲ್ಲಾ ಕಡೆಯೂ ಸಂಚಾರವನ್ನು ಸ್ಥಗಿತಗೊಳಿಸಿ ಬೇಡಿಕೆಯನ್ನು ಈಡೇರಿಸುವಂತೆ ಸಾರಿಗೆ ಸಿಬ್ಬಂದಿ ಆಗ್ರಹಿಸಿದರು. ಮುಷ್ಕರದ ಕುರಿತು ಮಾಹಿತಿ ಇಲ್ಲದೆ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.

10:04 December 11

ಬಂದ್​ಗೆ ಚಿಕ್ಕಬಳ್ಳಾಪುರದಲ್ಲಿ ಉತ್ತಮ ಪ್ರತಿಕ್ರಿಯೆ

ಬಸ್ ಸಂಚಾರ ಸ್ಥಗಿತ

ಚಿಕ್ಕಬಳ್ಳಾಪುರ: ಬಿಎಂಟಿಸಿ, ಕೆಎಸ್ಆರ್​ಟಿಸಿ ನೌಕರರನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿ ಬಸ್ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ದೂರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರಿಗೆ ದಿಕ್ಕು ತೋಚದಂತಾಗಿದೆ. ಬೆಂಗಳೂರು, ಕೋಲಾರ, ಗೌರಿಬಿದನೂರು ಸೇರಿದಂತೆ ನೆರೆ ರಾಜ್ಯ ಆಂಧ್ರಪ್ರದೇಶಕ್ಕೆ ಹೋಗುವ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.

09:49 December 11

ನಾಲ್ಕು ದಿನದ ಕಂದನಿಗೂ ತಟ್ಟಿದ ಬಂದ್​ ಬಿಸಿ :

ದಾವಣಗೆರೆ ಡಿಪೋ

ದಾವಣಗೆರೆ: ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ದಾವಣಗೆರೆ ಡಿಪೋದಿಂದ ಇಂದು 180 ಬಸ್​ಗಳು ಸಂಚಾರ ಆರಂಭಿಸಬೇಕಿತ್ತು. ಅದ್ರೆ ಕೇವಲ ನಾಲ್ಕು ಬಸ್​ಗಳನ್ನು ಮಾತ್ರ ಸಂಚಾರಕ್ಕೆ ಬಿಡಲಾಗಿದೆ. ಸಿಬ್ಬಂದಿ ಜೊತೆ ದಾವಣಗೆರೆ ಸಾರಿಗೆ ಇಲಾಖೆ ಅಧಿಕಾರಿಗಳು ಮಾತುಕತೆ ನಡೆಸಲು ಮುಂದಾದಾಗ ಅಧಿಕಾರಿಗಳ ಮಾತಿಗೆ ಕ್ಯಾರೇ ಎನ್ನದೆ ಹೋರಾಟಗಾರರು ಅಜ್ಞಾತ ಸ್ಥಳದಲ್ಲಿ ಇರುವುದು ಕಂಡುಬಂದಿತು.

ಇನ್ನು ಬಾಣಂತಿಯೊಬ್ಬರು ನಾಲ್ಕು ದಿನದ ಕಂದಮ್ಮನನ್ನು ಹಿಡಿದು ಬಸ್‌ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ.

09:34 December 11

ವಾಣಿಜ್ಯ ನಗರಿಯಲ್ಲಿ ಕಾವೇರಿದ ಪ್ರತಿಭಟನೆ:

ಹುಬ್ಬಳ್ಳಿ: ಸಾರಿಗೆ ನೌಕರರು ನೀಡಿರುವ ಮುಷ್ಕರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಂಬೆಳಗ್ಗೆ ರಸ್ತೆಗೆ ಇಳಿದ ಬಸ್​ಗಳನ್ನು ಸಾರಿಗೆ ನೌಕರರು ತಡೆದು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ಹೊಸುರು ಕ್ರಾಸ್, ಐಟಿ ಪಾರ್ಕ್ ಮುಂಭಾಗದಲ್ಲಿ ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಅಂತರ್​ ಜಿಲ್ಲಾ ಹಾಗೂ ಗ್ರಾಮೀಣ ಭಾಗದ ಬಸ್ ಸಂಚಾರ ಕೂಡ ವಿರಳವಾಗಿದೆ.

09:22 December 11

ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧ

ಸಾರಿಗೆ ನೌಕರರ ಮುಷ್ಕರ

ಗದಗ: ಸಾರಿಗೆ ನೌಕರರ ಮುಷ್ಕರದ ಬಿಸಿ ಜಿಲ್ಲೆಗೆ ತಟ್ಟಿದ್ದು, ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಗದಗ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಸ್ಥಗಿತವಾಗಿದೆ. ಫ್ಲಾಟ್ ಫಾರ್ಮ್ ಗೆ ಬಂದ್ ಬಸ್​ಗಳನ್ನು ಸಾರಿಗೆ ನೌಕರರು ವಾಪಸ್ ಕಳಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಯಾವುದೇ ಬಸ್ ಸಂಚಾರ ಮಾಡದಂತೆ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಇನ್ನು ಕಣ್ಣಿನ ಕಣ್ಣಿನ ಆಪರೇಷನ್​ಗೆ ಹೊರಟಿದ್ದ ರೋಗಿಯೊಬ್ಬರು ಬಂದ್ ಹಿನ್ನೆಲೆ ಪರದಾಡುವಂತಾಯಿತು. 

09:12 December 11

ಡಿಪೋ ಮುಂಭಾಗ ಮುಷ್ಕರಕ್ಕೆ ಮುಂದಾದ ಸಿಬ್ಬಂದಿ

ಬೆಂಗಳೂರು: ಬಿಎಂಟಿಸಿ‌ ಡಿಪೋಗಳಲ್ಲಿ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಬಸ್ ನಿಲ್ಲಿಸಿ ಡಿಪೋಗಳ ಮುಂಭಾಗ ಮುಷ್ಕರ ಆರಂಭಿಸಿದ್ದಾರೆ. ಯಶವಂತಪುರ ಡಿಪೋ ಸೇರಿದಂತೆ, ಕೆಲ ಡಿಪೋಗಳಲ್ಲಿ ಬಿಎಂಟಿಸಿ‌ ಬಸ್​ಗಳು ನಿಂತಲ್ಲೇ ನಿಂತಿವೆ. ಬಿಎಂಟಿಸಿ‌ ಬಿಡದಿ ಡಿಪೋನಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ.

09:07 December 11

ಸಾರಿಗೆ ಸಚಿವರ ತವರಲ್ಲಿ ಹೇಗಿದೆ ಬಂದ್​:

ಡಿಪೋದಲ್ಲೇ ನಿಂತ ಬಸ್​ಗಳು

ಬೆಳಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದರೆ ಸಾರಿಗೆ ನೌಕರರ ಮುಷ್ಕರಕ್ಕೆ ಬೆಳಗಾವಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿರುವ ಸಾರಿಗೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಗರ ಸಾರಿಗೆ ಸೇರಿದಂತೆ ಅಂತಾರಾಜ್ಯ ಬಸ್ ಸೇವೆ ಸಹ ಆರಂಭವಾಗಿವೆ.

08:59 December 11

ಮೆಜೆಸ್ಟಿಕ್ ನಿಲ್ದಾಣಕ್ಕೆ ಬಾರದ ಬಸ್​ಗಳು:

ಪ್ರತಿಭಟನೆ ಹಿನ್ನೆಲೆ ಸಂಚಾರ ಸ್ಥಗಿತ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಬಿಎಂಟಿಸಿ‌ ಬಸ್​ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬಿಎಂಟಿಸಿ‌ ಸಂಚಾರ ಅರ್ಧ ಬಂದ್ ಆಗಿದ್ದು, ಡಿಪೋದ ಮುಂಭಾಗ ಬಸ್​ಗಳನ್ನು ನಿಲ್ಲಿಸಿಸಲಾಗಿದೆ. ಈ ಹಿನ್ನೆಲೆ ಪ್ರಯಾಣಿಕರು ಬಸ್ಸುಗಳಿಗಾಗಿ ಕಾದು ಕುಳಿತಿರುವ ದೃಶ್ಯ ಸಿಲಿಕಾನ್​ ಸಿಟಿಯಲ್ಲಿ ಕಂಡುಬಂದಿದೆ.

08:04 December 11

ಬಸ್​ ಸಂಚಾರ ಸ್ಥಗಿತ:

ಮುದ್ದೇಬಿಹಾಳದಲ್ಲಿ ಬಸ್ ಸಂಚಾರ ಸ್ಥಗಿತ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ನಾಲ್ಕು ನಿಗಮಗಳ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿದ್ದು,  ದಿಢೀರ್​ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

ಮುದ್ದೇಬಿಹಾಳ :ಯಾವುದೇ ಮುನ್ಸೂಚನೆ ನೀಡದೆ ಮುದ್ದೇಬಿಹಾಳದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಗ್ರಾಮೀಣ ಭಾಗದ ಸಾರಿಗೆ ಸಂಚಾರ ಆರಂಭಗೊಂಡಿದ್ದು, ದೂರದ ಊರುಗಳ ಬಸ್ ಸಂಚಾರ ಬಂದ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಪಿಎಸ್​ಐ ಮಲ್ಲಪ್ಪ ಮಡ್ಡಿ ಮುದ್ದೇಬಿಹಾಳ ಘಟಕಕ್ಕೆ ಭೇಟಿ ನೀಡಿ, ಭದ್ರತೆ ಕೈಗೊಂಡಿದ್ದಾರೆ.

ಇನ್ನು ಕಡೂರು - ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ಬಸ್ ಚಾಲಕನೋರ್ವ ಏಕವಚನದಲ್ಲಿ ಮುದ್ದೇಬಿಹಾಳ ಸಾರಿಗೆ ಘಟಕ ವ್ಯವಸ್ಥಾಪಕರೊಂದಿಗೆ ಕೆಲ ಕಾಲ ವಾಗ್ವಾದ ನಡೆಸಿದ ಪ್ರಸಂಗ ಕೂಡ ನಡೆದಿದೆ.

Last Updated : Dec 11, 2020, 5:50 PM IST

ABOUT THE AUTHOR

...view details