ನೀಲಸಂದ್ರದಲ್ಲಿರುವ ಸಿಎಂಪಿ ಶಾಲೆಯಲ್ಲಿ ಮಹಿಳಾ ಅಗ್ನಿವೀರರಿಗೆ ತರಬೇತಿ ನೀಡಲಾಯಿತು ಬೆಂಗಳೂರು : ಪುರುಷರಿಗಿಂತ ತಾವೇನು ಕಮ್ಮಿಯಿಲ್ಲ ಎಂಬ ಛಲವಿತ್ತು. ದೇಶಕ್ಕಾಗಿ ಕೆಲಸ ಮಾಡುವ ಉತ್ಸಾಹವಿತ್ತು. ತಾನು ಕಂಡ ಕನಸು ನನಸಾಯಿತು ಎಂಬ ಸಂತೃಪ್ತಿ ಅವರಲ್ಲಿ ಮನೆ ಮಾಡಿತ್ತು. ಇದು ಮನೆ - ಮಠ ಊರು ತೊರೆದು ವಿವಿಧ ರಾಜ್ಯಗಳಿಂದ ಬಂದು ತರಬೇತಿ ಪಡೆಯುತ್ತಿರುವ ಮಹಿಳಾ ಅಗ್ನಿವೀರರ ಮುಖದಲ್ಲಿ ಕಂಡುಬಂದಂತಹ ಆತ್ಮವಿಶ್ವಾಸದ ಮುಖಭಾವಗಳು.
ಭಾರತೀಯ ಸೇನೆಯಲ್ಲಿ ಸ್ತ್ರೀಯರ ಸಬಲೀಕರಣಗೊಳಿಸುವ ಸಲುವಾಗಿ ಕಳೆದ ವರ್ಷ ರಕ್ಷಣಾ ಇಲಾಖೆಯಿಂದ ಜಾರಿತಂದಿದ್ದ ಅಗ್ನಿಪಥ ಯೋಜನೆಯಡಿ ಮೊದಲ ಬಾರಿಗೆ ನೇಮಕವಾದ 100 ಮಂದಿ ಮಹಿಳಾ ಅಗ್ನಿವೀರರಿಗೆ ನೀಲಸಂದ್ರದಲ್ಲಿರುವ ಸಿಎಂಪಿ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದೆ. 31 ವಾರಗಳ ಕಾಲ ಅಗ್ನಿವೀರ ಹುದ್ಧೆಗೆ ಬೇಕಾದ ದೈಹಿಕ - ಮಾನಸಿಕ ಸೇರಿದಂತೆ ಎಲ್ಲಾ ರೀತಿಯ ತರಬೇತಿ ಕೊಡಲಾಗುತ್ತಿದೆ.
ನೇಮಕಗೊಂಡ 100 ಮಹಿಳಾ ಅಗ್ನಿವೀರರನ್ನು ನಾಲ್ಕು ತುಕಡಿಗಳಾಗಿ ವಿಂಗಡಿಸಿ ದೈಹಿಕ ಕಸರತ್ತು, ಬಂದೂಕು ತರಬೇತಿ, ಅಥ್ಲೆಟಿಕ್ಸ್, ಬಾಕ್ಸಿಂಗ್ ಸೇರಿದಂತೆ ಕ್ರೀಡಾ ಚಟುವಟಿಕೆ ಹಾಗೂ ಕಠಿಣ ಪರಿಸ್ಥಿತಿ ನಡುವೆ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ತರಬೇತಿ ಮುಕ್ತಾಯ ಬಳಿಕ ದೇಶದ ಯಾವುದೇ ಮೂಲೆಯಲ್ಲಿ ನಿಯೋಜಿಸಿದರೂ ಕರ್ತವ್ಯ ಮಾಡಬೇಕಾಗಿದೆ. ಅಲ್ಲದೆ ಲೆಬನಾನ್, ಸುಡಾನ್, ಸಿರಿಯಾ ಸೇರಿದಂತೆ ವಿದೇಶಗಳಲ್ಲಿರುವ ವಿಶ್ವಶಾಂತಿಪಾಲನಾ ಪಡೆಗೂ ಇಲ್ಲಿನ ಅಗ್ನಿವೀರರು ಸೇವೆ ಸಲ್ಲಿಸುವ ಅವಕಾಶವಿದೆ.
ಬ್ರಿಗೇಡಿಯರ್ ಜೋಷ್ ಅಬ್ರಾಹಂ ಮಾತನಾಡಿ, ಅಗ್ನಿಪಥ ಯೋಜನೆ ಜಾರಿಯಾದ ಬಳಿಕ ಮೊದಲ ಬಾರಿ ಅಗ್ನಿವೀರರಾಗಿ ಆಯ್ಕೆಯಾಗಿರುವ 100 ಯುವತಿಯರು, ಸೇನೆಗೆ ಸೇರಲು ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಸೂರ್ಯ ಉದಯಿಸುವ ಮುನ್ನವೇ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಆರಂಭವಾಗುವ ಇವರ ತರಬೇತಿ ಇಡೀ ದಿನ ನಡೆಯುತ್ತದೆ. ಈ ವೇಳೆ ಅವರು ವಿವಿಧ ರೀತಿಯ ಅಭ್ಯಾಸದಲ್ಲಿ ತೊಡಗುತ್ತಾರೆ ಎಂದರು.
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಸೇನೆಯಲ್ಲೂ ಅಪಾರ ಕೊಡುಗೆ ನೀಡುತ್ತಿದ್ದಾರೆ. ದಶಕಗಳಿಂದಲೂ ಸೇನೆಯಲ್ಲಿ ಮಹಿಳೆಯರು ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2020ರ ಜನವರಿಯಲ್ಲಿ ಮೊದಲ ಬಾರಿ ಸೇನೆಯಲ್ಲಿ ಯೋಧರಾಗಿ ಮಹಿಳೆಯರು ಸೇರ್ಪಡೆಯಾದರು ಎಂದು ಹೇಳಿದರು.
ಲಿಂಗತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ :ಅಗ್ನಿಪಥ ಯೋಜನೆ ಜಾರಿಯಾದ ಬಳಿಕ ಈಗ ಮೊದಲ ಬಾರಿ ಅಗ್ನಿವೀರರಾಗಿ ಮಹಿಳಾ ಯೋಧರನ್ನು ನೇಮಿಸಿಕೊಂಡು ತರಬೇತಿ ನೀಡಲಾಗುತ್ತಿದೆ. 31 ವಾರಗಳ ಶಸ್ತ್ರಾಸ್ತ್ರ, ಕಾರ್ಯಾಚರಣೆ ಸೇರಿದಂತೆ ಸಮಗ್ರ ತರಬೇತಿ ನೀಡಲಾಗುತ್ತಿದೆ. ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲೂ ಇದು ಮಹತ್ವದ ಹೆಜ್ಜೆಯಾಗಿದೆ ಎಂದರು.
ವೃತ್ತಿಯಲ್ಲಿ ಮತ್ತು ವೇತನದಲ್ಲಿ ಸರಿಸಮಾನ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಮಹಿಳೆಯರಲ್ಲಿ ಸಹನೆಯ ಶಕ್ತಿ ಹೆಚ್ಚಿರುತ್ತದೆ. ಮಹಿಳೆಯರ ಸಾಮರ್ಥ್ಯ ಯಾವುದಕ್ಕೂ ಕಡಿಮೆ ಇಲ್ಲ. ನಾಲ್ಕು ವರ್ಷಗಳ ಬಳಿಕ ಸೇನೆಯಲ್ಲಿ ಮುಂದುವರಿಯಲು ಅವಕಾಶ ದೊರೆಯದಿದ್ದರೂ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶಗಳು ದೊರೆಯಲಿವೆ. ಸೇನೆಯಲ್ಲಿ ಪಡೆದಿರುವ ತರಬೇತಿಯಿಂದ ಅವರಿಗೆ ಅನುಕೂಲವಾಗಲಿದೆ ಎಂದರು.
ಎಸಿ ರೂಮ್ನಲ್ಲಿ ಕೆಲಸ ಮಾಡಲು ಇಷ್ಟವಿಲ್ಲ: ದೇಶದಾದ್ಯಂತ ಪರೀಕ್ಷೆ ಬರೆದ 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಲ್ಲಿ 100 ಮಂದಿ ತರಬೇತಿಗೆ ನೇಮಕವಾಗಿದ್ದಾರೆ. ಈ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಕನ್ನಡತಿ ಉಡುಪಿ ಬೈಂದೂರಿನ ಶ್ರೀದೇವಿ ಈಟಿವಿ ಭಾರತ್ ಜೊತೆ ಪ್ರತಿಕ್ರಿಯಿಸಿದ್ದಾರೆ. 'ಚಿಕ್ಕವಯಸ್ಸಿನಲ್ಲಿ ಸೇನೆಯ ವಿಡಿಯೊ, ಸೈನಿಕರ ಸಮವಸ್ತ್ರ ವೇಷದಲ್ಲಿ ನೋಡಿಕೊಂಡು ಬೆಳೆದೆ, ಕೆಲಸ ಮಾಡಿದ್ದರೆ ಸೇನೆಯಲ್ಲಿ ಎಂದು ಚಿಕ್ಕವಯಸ್ಸಿನಲ್ಲೇ ನಿರ್ಧರಿಸಿದ್ದೆ ಎಂದರು.
ಬಿಕಾಂ ಪದವಿ ಮುಗಿಸಿಕೊಂಡಿರುವಾಗಲೇ ಧಾರವಾಡ ಕೋಚಿಂಗ್ ಸೆಂಟರ್ನಲ್ಲಿ ಅಧ್ಯಯನ ಮಾಡುತ್ತಿದ್ದೆ. ನನಗೆ ಎಸಿ ರೂಮ್ನಲ್ಲಿ ಕೆಲಸ ಮಾಡಲು ಇಷ್ಟವಿಲ್ಲ. ಮಧ್ಯಮ ವರ್ಗದವಳಾಗಿರುವ ನಾನು ಸಹ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಲು ಅಗ್ನಿಪಥ ಯೋಜನೆ ಸಹಕಾರಿಯಾಗಿದೆ. ನಾಲ್ಕು ವರ್ಷಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಶೇ. 25 ರಷ್ಟು ಮಂದಿ ಸೇನೆಯಲ್ಲಿ ಶಾಶ್ವತವಾಗಿ ಮುಂದುವರೆಯಬಹುದಾಗಿದೆ. ನನಗೆ ಈ ಬಗ್ಗೆ ಚಿಂತೆಯಿಲ್ಲ. ಸೇನೆಯಲ್ಲಿ ಅವಕಾಶ ಸಿಗದಿದ್ದರೂ ಗರಿಷ್ಠ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸುವ ಸೌಭಾಗ್ಯ ದೊರೆಕಿರುವುದು ಖುಷಿತಂದಿದೆ' ಎಂದಿದ್ದಾರೆ.
ವೆಪನ್ ಹಿಡಿಯೋದು ನಿಜಕ್ಕೂ ಗ್ರೇಟ್. ಎಲ್ಲರೂ ಐಐಟಿ ಮಾಡಿದರೆ ದೇಶದ ರಕ್ಷಣೆ ಮಾಡುವವರು ಯಾರು ? ಅಲ್ಲದೆ ಬಾಲ್ಯದಿಂದಲೂ ಸೇನೆ ಸೇರಬೇಕೆಂಬ ಕನಸು ನನ್ನದು. ಮಹಿಳೆಯರು ಆರ್ಮಿಯಲ್ಲಿ ಕೆಲಸ ಮಾಡಬಹುದು ಎಂದು ಅಗ್ನಿಪಥದ ಯೋಜನೆಯಿಂದ ಸಾಧ್ಯವಾಗಿದೆ ಎನ್ನುತ್ತಾರೆ ಆಂಧ್ರದ ಅಂಕಪಲ್ಲಿ ಜಿಲ್ಲೆಯ ಮಂಗಳಪುರ ಗ್ರಾಮದ ಸೋನಿಯಾ.
ಇದನ್ನೂ ಓದಿ :ದೇಶ ಸೇವೆ ಸಲ್ಲಿಸಿದ ಅಗ್ನಿವೀರರಿಗೆ ಆದ್ಯತೆ ಮೇರೆಗೆ ನೆರವು ನೀಡಿ: ರಾಜನಾಥ್ ಸಿಂಗ್ ಕರೆ