ಮಾಹಿತಿ ನೀಡದ ಬಿಎಂಆರ್ಸಿಎಲ್ ವಿರುದ್ಧ ಪ್ರಯಾಣಿಕರ ಆಕ್ರೋಶ ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ಸುಗಮ ಸಂಚಾರದಲ್ಲಿ ವ್ಯತ್ಯಯ ಆಗಿರುವ ಬಗ್ಗೆ ಮಾಹಿತಿ ನೀಡದೇ ಇರುವ ಬಿಎಂಆರ್ಸಿಎಲ್ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ರೀ- ರೈಲು ಹಳಿ ತಪ್ಪಿದ್ದರಿಂದ ಅನಿವಾರ್ಯವಾಗಿ ಉಭಯ ಹಳಿಗಳ ಮಧ್ಯೆ ಮೆಟ್ರೋ ಸಂಚಾರ ತಡೆಹಿಡಿಯಲಾಯಿತು. ಈ ಬಗ್ಗೆ ಅರಿಯದ ಪ್ರಯಾಣಿಕರು ಯಶವಂತಪುರ ಮೆಟ್ರೋ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯುವಂತಾಯಿತು. ಸುದೀರ್ಘ ವಾರಾಂತ್ಯ ರಜೆ ಬಳಿಕ ಕಂಪನಿ ಕೆಲಸಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
ರೈಲು ಬರದೇ ತಡವಾಗುತ್ತಿರುವುದರ ಬಗ್ಗೆ ಮೆಟ್ರೋ ಸಿಬ್ಬಂದಿಯನ್ನು ಪ್ರಯಾಣಿಕರು ಪ್ರಶ್ನಿಸಿದಾಗ, ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ರೀ ರೈಲು ಹಳಿ ತಪ್ಪಿದ್ದರಿಂದ ತಾತ್ಕಾಲಿಕವಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೊದಲೇ ಮಾಹಿತಿ ನೀಡದೆ, ಪ್ರಶ್ನಿಸಿದಾಗ ಮಾತ್ರ ವಿಷಯ ತಿಳಿಸಿದ ಮೆಟ್ರೋ ಸಿಬ್ಬಂದಿ ಮೇಲೆ ಪ್ರಯಾಣಿಕರು ಕೆಂಡಾಮಂಡಲವಾದರು.
ಟಿಕೆಟ್ ಪಡೆದುಕೊಂಡ ಬಳಿಕ ತಡವಾಗಿ ಮಾಹಿತಿ ನೀಡುತ್ತೀದ್ದರಲ್ಲ ಎಂದು ಸಿಬ್ಬಂದಿಯೊಡನೆ ಮಾತಿನ ಚಕಮಕಿ ನಡೆಸಿ ಬಿಎಂಆರ್ಸಿಎಲ್ಗೆ ಹಿಡಿಶಾಪ ಹಾಕಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರಯಾಣಿಕರು ಬಿಎಂಟಿಸಿ ಹಾಗೂ ಆಟೋ ಹತ್ತಿ ಕಚೇರಿಗಳಿಗೆ ತಲುಪಿದರು. ರಾಜಾಜಿನಗರ ಬಳಿ ರೀ- ರೈಲು ಹಳಿ ತಪ್ಪಿದ ಹಿನ್ನೆಲೆ ಹೆಚ್ಚುವರಿ ಫೀಡರ್ ಬಸ್ಗಳನ್ನು ಬಿಎಂಟಿಸಿ ಒದಗಿಸಿದೆ. ಯಶವಂತಪುರದಿಂದ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಪ್ರಯಾಣಿಕರಿಗೆ ಅನುಗುಣವಾಗಿ ಯಶವಂತಪುರ ಮೆಟ್ರೋ ನಿಲ್ದಾಣದಿಂದ ಬಸ್ ಸೇವೆ ಕಲ್ಪಿಸಲಾಗಿದೆ.
ಹಳಿತಪ್ಪಿದ ರೀ ರೈಲ್ ಅನ್ನು ಸರಿಪಡಿಸಲು ಇಂಜಿನಿಯರ್ಗಳು ಹರಸಾಹಸ ಪಡುತ್ತಿದ್ದು, ಕಳೆದ ಏಳೆಂಟು ತಾಸುಗಳಿಂದ ದುರಸ್ತಿ ಕಾರ್ಯದಲ್ಲಿ ಇಂಜಿನಿಯರ್ಗಳು ನಿರತರಾಗಿದ್ದಾರೆ. ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ರೀ ರೈಲ್ ಅನ್ನು ಟ್ರ್ಯಾಕ್ಗೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಒಂದೇ ಟ್ರ್ಯಾಕ್ನಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ.
ಹಳಿ ತಪ್ಪಿದ ಮೆಟ್ರೋ ರೀ- ರೈಲು: ಇಂದು ಬೆಳಗ್ಗೆ ರಾಜಾಜಿನಗರದ ಬಳಿ ನಮ್ಮ ಮೆಟ್ರೋ ಗ್ರೀನ್ ಲೈನ್ನಲ್ಲಿ ರೀ ರೈಲು ಹಳಿ ತಪ್ಪಿದ್ದು, ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳಕ್ಕೆ ತಲುಪಲು ಸಾಧ್ಯವಾಗದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಸದ್ಯ ರೀ ರೈಲು ಅನ್ನು ಮತ್ತೆ ಹಳಿಗೆ ತರುವ ಕೆಲಸವನ್ನು ಮೆಟ್ರೋ ತಾಂತ್ರಿಕ ಸಿಬ್ಬಂದಿ ಮಾಡುತ್ತಿದ್ದು, ಒಂದು ಟ್ರ್ಯಾಕ್ನಲ್ಲಿ ಮಾತ್ರ ಮೆಟ್ರೋ ರೈಲುಗಳು ಸಂಚರಿಸುತ್ತಿವೆ.
ಇದನ್ನೂ ಓದಿ:ಬೆಂಗಳೂರು: ಹಳಿ ತಪ್ಪಿದ ಮೆಟ್ರೋ ರೀ ರೈಲ್... ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ಕಾರ್ಯಾಚರಣೆ