ಬೆಂಗಳೂರು: ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ, ಜನವರಿ 23ರ ಗಡುವು ನೀಡಲಾಗಿದೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಿತು. ಮೀಸಲಾತಿ ಹೆಚ್ಚಳದ ಬಗ್ಗೆ ಸಮುದಾಯದ ಪ್ರಮುಖರು ಸಭೆ ನಡೆಸಿದ್ದಾರೆ. ಸರ್ಕಾರಕ್ಕೆ ಶೇ.15ರಷ್ಟು ಮೀಸಲಾತಿ ಹೆಚ್ಚಿಸುವಂತೆ ಜ. 23ರ ಅಂತಿಮ ಗಡುವು ನೀಡುವ ಬಗ್ಗೆ, ನಂಜಾವಧೂತ ಸ್ವಾಮೀಜಿ ನಿರ್ಣಯ ಮಂಡನೆ ಮಾಡಿದರು. ಅಷ್ಟರೊಳಗೆ ಸರ್ಕಾರ ಸಿಹಿ ಸುದ್ದಿ ಕೊಡಲಿ ಎಂದು ಒತ್ತಾಯಿಸಿದರು.
ಮೀಸಲಾತಿ ನೀಡಲು ಗಡುವು ನಿಗದಿ:ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಆದರೆ ನಮ್ಮ ಹಕ್ಕನ್ನು ಕೊಡಿ, 16% ಇರುವ ನಮಗೆ ಶೇ.15 ರಷ್ಟು ಮೀಸಲಾತಿಯನ್ನು ನೀಡಿ. ನಗರ ಪ್ರದೇಶದ ಒಕ್ಕಲಿಗರನ್ನ ಆರ್ಥಿಕ ಹಿಂದುಳಿದ ವರ್ಗ ಮೀಸಲಾತಿಯಡಿ ಸೇರಿಸಬೇಕು. ಇಲ್ಲಿಯವರೆಗೂ ಸಹಿಸಿಕೊಂಡು ಬಂದಿದ್ದು ಸಾಕು. ನಮ್ಮ ಸಹಿಸುವಿಕೆಯೇ ದೌರ್ಬಲ್ಯ ಎಂದು ತಿಳಿದುಕೊಂಡ್ರೆ ಅದನ್ನ ಸಹಿಸುವುದಿಲ್ಲ. ಆದಷ್ಟು ಬೇಗ ನಮ್ಮ ಸಮುದಾಯಕ್ಕೆ ಮೀಸಲಾತಿಯನ್ನ ನೀಡಬೇಕು. ಸಮುದಾಯದ ಪರವಾಗಿ ಜನವರಿ 23 ರಂದು ದೇವೇಗೌಡರಿಗೆ, ಎಸ್ ಎಂ ಕೃಷ್ಣ ಅವರನ್ನು ಗೌರವಿಸುವ ಕಾರ್ಯಕ್ರಮ ನಿಗದಿ ಮಾಡಿದ್ದೇವೆ. ಅಷ್ಟರೊಳಗೆ ನಮಗೆ ಮೀಸಲಾತಿಯನ್ನ ನೀಡಬೇಕು ಎಂದು ಒತ್ತಾಯಿಸಿದರು.
ಡಬಲ್ ಇಂಜಿನ್ ಸರ್ಕಾರ ಇದೆ, ಮೊನ್ನೆ ಮೋದಿಯವರು ಬಂದು ಹೋಗಿದ್ದಾರೆ. ನಮ್ಮ ಎರಡು ಬೇಡಿಕೆಯಲ್ಲಿ ಒಂದು ಕೇಂದ್ರ ಸರ್ಕಾರ, ಮತ್ತೊಂದನ್ನು ರಾಜ್ಯ ಸರ್ಕಾರ ಈಡೇರಿಸಬೇಕು. ಈ ಬೇಡಿಕೆಯನ್ನು ಜನವರಿ 23ರೊಳಗೆ ಈಡೇರಿಸಬೇಕು. ಈ ಗಡುವಿನಲ್ಲಿ ಈಡೇರಿಸಿದ್ರೆ ವಿಜಯೋತ್ಸವ ಆಚರಿಸೋಣ. ಇಲ್ಲದಿದ್ದರೆ ಹೋರಾಟದ ಕಿಚ್ಚನ್ನು ಹಚ್ಚೋಣ ಎಂದು ಕರೆ ನೀಡಿದರು.