ಬೆಂಗಳೂರು: ಬೆಳ್ಳಳ್ಳಿ ವೃತ್ತಕ್ಕೆ, ಬೆಳ್ಳಳ್ಳಿ ಟಿಪ್ಪು ವೃತ್ತ ಎಂದು ನಾಮಕರಣ ಮಾಡಿದ್ದ ನಿರ್ಣಯವನ್ನು ಆಡಳಿತ ಪಕ್ಷ ಬಿಜೆಪಿ ನಿನ್ನೆಯಷ್ಟೇ ರದ್ದು ಮಾಡಿತ್ತು. ಆದ್ರೆ, ಈ ನಿರ್ಣಯವನ್ನು ಬಿಜೆಪಿ ಮತ್ತೆ ವಾಪಸ್ ತೆಗೆದುಕೊಂಡಿದೆ.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ತನ್ನ ನಿರ್ಧಾರದಿಂದ ಏಕಾಏಕಿ ಯೂಟರ್ನ್ ಹೊಡೆದಿದೆ ಎಂದು ವಿಪಕ್ಷ ಟೀಕಿಸಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದಲ್ಲಿದ್ದಾಗ ಟಿಪ್ಪು ವೃತ್ತ ಅಂತ ನಾಮಕರಣ ಮಾಡಲಾಗಿತ್ತು. ಕೌನ್ಸಿಲ್ ನಿರ್ಣಯವನ್ನು ಬಿಜೆಪಿ ಬದಲು ಮಾಡಿ ನಾಮಕರಣ ರದ್ದು ಮಾಡಿತ್ತು. ಬಿಜೆಪಿ ನಡೆಯನ್ನು ವಿರೋಧ ಮಾಡಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಇಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೂಡಲೇ ನಿರ್ಣಯವನ್ನ ವಾಪಸ್ ಪಡೆಯುವಂತೆ ಕಾಂಗ್ರೆಸ್ ಆಗ್ರಹಿಸಿತು. ಕಾನೂನಿನ ಪ್ರಕಾರ ನಿರ್ಧಾರ ಮಾಡಬೇಕು, ಏಕಾಏಕಿ ನಾಮಕರಣ ರದ್ದು ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ಬಳಿಕ ಕಾನೂನಿನ ಪ್ರಕಾರ ತೀರ್ಮಾನ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.
ಟಿಪ್ಪು ಸರ್ಕಲ್ ನಾಮಕರಣ ವಿಚಾರವಾಗಿ ಯೂಟರ್ನ್ ಹೊಡೆದ ಬಿಬಿಎಂಪಿ : ವಿಪಕ್ಷ ಟೀಕೆ! ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಈ ವಿಚಾರವನ್ನು ಆಯುಕ್ತರಿಗೆ ತೀರ್ಮಾನ ಮಾಡಲು ತಿಳಿಸಲಾಗಿದೆ. ಯಾವ ರೀತಿ ತೀರ್ಮಾನಿಸುತ್ತಾರೋ, ಯಾವ ಆಧಾರದಲ್ಲಿ ಹಿಂದೆ ತೆಗೆದುಕೊಂಡಿದ್ದಾರೋ ನೋಡಬೇಕು ಎಂದರು.
ವಿಪಕ್ಷ ಕೆಂಡಾಮಂಡಲ:ವಿಪಕ್ಷ ನಾಯಕ ವಾಜಿದ್ ಮಾತನಾಡಿ, ಮೇಯರ್ ಮತ್ತು ಆಡಳಿತ ಪಕ್ಷದ ನಾಯಕರು, ಕೆಎಂಸಿ ಕಾಯ್ದೆಯನ್ನು ಓದಿಕೊಂಡಿಲ್ಲ ಅನಿಸುತ್ತೆ. ಟಿಪ್ಪು ಹೆಸರಿನ ನಾಮಕರಣ ವಿಚಾರ ಒಂದು ವರ್ಷದ ಹಿಂದೆ ತೆಗೆದುಕೊಂಡಿರುವ ನಿರ್ಣಯ. ಹಿಂದೆ ಆಯುಕ್ತರು, ಸರ್ಕಾರದಿಂದ ಒಪ್ಪಿಗೆ ಆಗಿ ಬಂದಿರುತ್ತದೆ. ಆದರೆ ಏಕಾಏಕಿ ಸುಮೋಟೋ ನಿರ್ಣಯ ತೆಗೆದುಕೊಂಡು, ಆ ಹೆಸರು ತೆಗೆದು ಹಾಕಲು ಮುಂದಾಗಿರುವುದು ಕಾನೂನು ಬಾಹಿರ. ಈ ಸಂಬಂಧ ಆಯುಕ್ತರು ಆಶ್ವಾಸನೆ ನೀಡಿದ್ದಾರೆ, ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುತ್ತೇವೆ ಎಂದಿದ್ದಾರೆ. ಚರ್ಚೆ ನಡೆಯುವುದಿದ್ದರೂ ನಡೆಯಲಿ ನಾವು ಅದಕ್ಕೂ ಸಿದ್ಧರಿದ್ದೇವೆ ಎಂದರು.
ಸೂಕ್ತ ನಿರ್ಧಾರ ಎಂದ ಆಯುಕ್ತರು:ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಮಾತನಾಡಿ, ಸಭೆ ತೆಗೆದುಕೊಂಡ ನಿರ್ಧಾರದ ಮರು ಚರ್ಚೆ ಮಾಡಲು, ತಿದ್ದುಪಡಿ ಮಾಡಲು ಸಭೆಗೆ ಅಧಿಕಾರವಿದೆ. ಆದರೆ ಯಾವ ನಿಯಮದಡಿ ಇದನ್ನು ಮಾಡಬೇಕು ಎಂಬುದನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.