ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗ್ತಾ ಇದ್ದಂತೆ, ಬಂಡಾಯದ ಬಿಸಿ ಹೆಚ್ಚಾಗಿದೆ. ಟಿಕೆಟ್ ಮಿಸ್ ಆಗಿದ್ದಕ್ಕೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಬೀದಿಗಿಳಿದಿದ್ದಾರೆ. ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ಡಿಕೆಶಿ ನಿವಾಸಕ್ಕೆ ದೌಡಾಯಿಸಿ, ಟಿಕೆಟ್ಗಾಗಿ ಲಾಬಿ ನಡೆಸಿದರು. ಇತ್ತ ಟಿಕೆಟ್ ಘೋಷಣೆಯಾಗದೇ ಉಳಿದುಕೊಂಡ ಹಾಲಿ ಶಾಸಕರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಟಿಕೆಟ್ ಲಾಬಿ ನಡೆಸಲು ತಮ್ಮ ನಾಯಕರು ಮನೆಗೆ ದೌಡಾಯಿಸಿದರು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿ ನಿವಾಸಕ್ಕೆ ತೆರಳಿ ಇನ್ನೂ ಟಿಕೆಟ್ ಘೋಷಣೆಯಾಗದಿರುವ ಬಗ್ಗೆ ಚರ್ಚೆ ನಡೆಸಿದರು.
ಶಿಕಾರಿಪುರ ಕಾರ್ಯಕರ್ತರ ಹೈಡ್ರಾಮ:ಶಿಕಾರಿಪುರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೆಂದು ಸಿದ್ದರಾಮಯ್ಯ ನಿವಾಸದ ಬಳಿ ಕಾರ್ಯಕರ್ತರು ಹೈಡ್ರಾಮಾ ಮಾಡಿದ್ರು. ವಿಜಯೇಂದ್ರ ಗೆಲ್ಲಿಸುವುದಕ್ಕೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನ ಹಾಕ್ತಿಲ್ಲ ಅಂತಾ ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಎಬ್ಬಿಸಿದ್ರು. ಶಿಕಾರಿಪುರ ಟಿಕೆಟ್ ನಾಗರಾಜ್ ಗೌಡಗೆ ಕೊಡಬೇಕು. ಗೋಣಿ ಮಹಾಂತೇಶ್ಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ನೆಲಕಚ್ಚುತ್ತೆ ಅಂತಾ ಆಕ್ರೋಶ ಹೊರಹಾಕಿದ್ರು.
ಸಿದ್ದರಾಮಯ್ಯ ಭೇಟಿಯಾದ ಅಖಂಡ:ಇನ್ನು ಪುಲಕೇಶಿನಗರ ಟಿಕೆಟ್ಗಾಗಿ ಮೂವರ ನಡುವೆ ಬಿಗ್ ಫೈಟ್ ನಡೀತಾ ಇದೆ. ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಎರಡೂ ಲಿಸ್ಟ್ನಲ್ಲಿ ಟಿಕೆಟ್ ಅನೌನ್ಸ್ ಆಗಿಲ್ಲ. ದಲಿತ ಮತಗಳು ಹೆಚ್ಚಿವೆ ಅನ್ನೋ ಕಾರಣಕ್ಕೆ ಮಾಜಿ ಡಿಸಿಎಂ ಜಿ ಪರಮೇಶ್ವರ್ ಕೂಡ ಪುಲಕೇಶಿನಗರದ ಮೇಲೆ ಕಣ್ಣಾಕಿದ್ದಾರೆ. ಡಿ.ಕೆ.ಶಿವಕುಮಾರ್ ಅತ್ಯಾಪ್ತರಾದ ಸಂಪತ್ ರಾಜ್, ಪ್ರಸನ್ನ ಕುಮಾರ್ ಕೂಡ ಲಾಬಿ ನಡೆಸ್ತಾ ಇದ್ದಾರೆ.
ಟಿಕೆಟ್ ಘೋಷಣೆಯಾಗದೇ ಇರುವ ಕಾರಣ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತೊಮ್ಮೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ನಿಮ್ಮನ್ನೇ ನಂಬಿ ಪಕ್ಷಕ್ಕೆ ಬಂದು ಅತಿ ಹೆಚ್ಚು ಅಂತರದಿಂದ ಗೆದ್ದವನು. ಅಲ್ಪಸಂಖ್ಯಾತರು ಯಾರೂ ನನ್ನ ಮೇಲೆ ಮುನಿಸಿಕೊಂಡಿಲ್ಲ. ಬೇಕಿದ್ದರೆ ಮನೆಮನೆಗೆ ಹೋಗಿ ಅಭಿಪ್ರಾಯ ಸಂಗ್ರಹಿಸಿ ನೀವೇ ನಿರ್ಧರಿಸಿ. ಸ್ಥಳೀಯರು ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಳಿಕ ಮಾತನಾಡಿದ ಅವರು, ಮೂರನೇ ಪಟ್ಟಿಯಲ್ಲಿ ಟಿಕೆಟ್ ಸಿಗಲಿದೆ. ಸಿದ್ದರಾಮಯ್ಯ, ಜಮೀರ್ ಅಣ್ಣ, ಅಧ್ಯಕ್ಷರು ನನ್ನ ಬೆನ್ನಿಗೆ ನಿಂತಿದ್ದಾರೆ. ಮೂರನೇ ಪಟ್ಟಿಯಲ್ಲಿ ಬಿಡುಗಡೆ ಆಗುವ ವಿಶ್ವಾಸವಿದೆ. ನಾನು ಯಾವುದೇ ಪಕ್ಷಾಂತರ ಮಾಡಲು ಯೋಚನೆ ಮಾಡಿಲ್ಲ. ಕಾಣದ ಕೈಗಳ ಕೈವಾಡದ ಬಗ್ಗೆ ಮಾಹಿತಿಯಿಲ್ಲ. ಅವಕಾಶ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದರು.