ಬೆಂಗಳೂರು: ಎಣ್ಣೆಗಾಗಿ ಸ್ನೇಹಿತನ ಕೊಂದಿದ್ದ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಣ್ಣೆ ಪಾರ್ಟಿಯಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ; ಮೂವರ ಬಂಧನ
ಕುಡಿಯಲು ಎಣ್ಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಂದು ಹಾಕಿದ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.
ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣಸಿದ್ದಯ್ಯ ಬಂಧಿತ ಆರೋಪಿಗಳು. ಮೇ 31ರ ರಾತ್ರಿ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಬಾಟಲಿಯಿಂದ ಚುಚ್ಚಿ ಮಣಿ (26) ವರ್ಷ ಎಂಬಾತನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಹೀಗಾಗಿ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ಮುಂದುವರೆಸಿದ್ದರು.
ಸದ್ಯ ಆರೋಪಿಗಳ ಬಂಧನ ಮಾಡಿದ್ದು, ಆರೋಪಿಗಳ ಬಳಿಯಿಂದ ಹಲವಾರು ರೀತಿಯ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಕೆಂಗೇರಿ ಬಳಿಯ ಸ್ನೇಹಿತನ ರೂಂನಲ್ಲಿ ನಾಲ್ಕೈದು ಜನರ ಗುಂಪು ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ, ಮಣಿಯ ಕೈಯಲ್ಲಿ ಎಣ್ಣೆ ಬಾಟಲಿ ಇದ್ದು , ಆರೋಪಿಗಳು ಮಣಿಯ ಬಳಿ ಎಣ್ಣೆ ಬಾಟಲು ನೀಡುವಂತೆ ಕೇಳಿದ್ದಾರೆ. ಈ ವೇಳೆ, ಕುಡಿಯಲು ಮಣಿ ಮದ್ಯ ಕೊಡದಿದ್ದಕ್ಕೆ ಮೊದಲು ಗಲಾಟೆಯಾಗಿದೆ. ನಂತರ ಮಣಿಗೆ ಸ್ನೇಹಿತರು ಹೊಡೆದಿದ್ದಾರೆ. ಬಳಿಕ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಮಣಿಯ ಕೊಲೆಯಲ್ಲಿ ಅಂತ್ಯವಾಗಿದೆ.