ಬೆಂಗಳೂರು : ಮೂರು ಪರೀಕ್ಷೆ ಬರೆದು ಈ ಪೈಕಿ ಯಾವ ಯಾವ ಪರೀಕ್ಷೆಯಲ್ಲಿ ಯಾವ ಯಾವ ವಿಷಯಕ್ಕೆ ಹೆಚ್ಚು ಅಂಕ ಬಂದಿದೆಯೋ ಆ ಅಂಕಗಳನ್ನೇ ಉಳಿಸಿಕೊಳ್ಳುವ ಅವಕಾಶ ಇನ್ಮುಂದೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಮಾರ್ಗಸೂಚಿ ಹೊರಡಿಸಿದೆ. ಪ್ರಸಕ್ತ ವರ್ಷದಿಂದಲೇ ನೂತನ ಪದ್ದತಿಯಂತೆ ಪರೀಕ್ಷೆ ನಡೆಸಲು ಸರ್ಕಾರ ಸೂಚನೆ ನೀಡಿದೆ. ಹಾಗಾಗಿ, ಈ ಬಾರಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಒಂದೇ ವರ್ಷದಲ್ಲಿ ಮೂರು ಅವಕಾಶಗಳು ಸಿಗಲಿವೆ.
ಪೂರಕ ಪರೀಕ್ಷೆ ಹೆಸರಿನ ಬದಲಿಗೆ ವಾರ್ಷಿಕ ಪರೀಕ್ಷೆ 1,2,3 ಎಂದು ಹೆಸರಿಸಿ ಮೂರು ಅವಕಾಶಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸುವುದು ಪರೀಕ್ಷಾ ಬದಲಾವಣೆಯ ಉದ್ದೇಶ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.
ಈ ಮೂರು ಪರೀಕ್ಷೆಗಳಲ್ಲಿ ವಿಷಯ ಮತ್ತು ಕಠಿಣತೆಯ ಮಟ್ಟದಲ್ಲಿ ಏಕರೂಪತೆಯನ್ನು ಕಾಯ್ದುಕೊಂಡು ವಿದ್ಯಾರ್ಥಿಗಳು ಈ ಮೂರು ಪ್ರಯತ್ನಗಳಲ್ಲಿ ಗಳಿಸಿದ ಅಂಕಗಳಲ್ಲಿ ವಿಷಯವಾರು ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲು ಉದ್ದೇಶಿಸಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶಿಫಾರಸು ಮಾಡಿದ್ದು, ಅದರಂತೆ ಪರೀಕ್ಷೆ ನಡೆಸಲು ಸರ್ಕಾರ ಮಾರ್ಗಸೂಚಿ ರೂಪಿಸಲಾಗಿದೆ.
ಮಾರ್ಗಸೂಚಿಗಳಿವು..: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ತರಗತಿಯಲ್ಲಿ ಶೇ.75 ರಷ್ಟು ಹಾಜರಾತಿ ಹೊಂದಿರುವುದು ಕಡ್ಡಾಯ. ಹಾಜರಾತಿ ಶೇ. 75ಕ್ಕಿಂತ ಕಡಿಮೆಯಾದಲ್ಲಿ ಪರೀಕ್ಷೆ ಬರೆಯಲು ಅನರ್ಹರಾಗುತ್ತಾರೆ.
- ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುವ ಹೊಸಬರು ಮತ್ತು ಖಾಸಗಿ ಅಭ್ಯರ್ಥಿಗಳು ಪರೀಕ್ಷೆ 1ನ್ನು ಬರೆಯದೇ ಎರಡನೇ ಮತ್ತು ಮೂರನೇ ಪರೀಕ್ಷೆಗೆ ಹಾಜರಾಗುವಂತಿಲ್ಲ. ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ನೀಡುವ ಸಂಬಂಧ ಪ್ರತಿ ಕಾಲೇಜಿಗೂ ಡಿಡಿಪಿಐ ರಚಿಸುವ ತಂಡ ಭೇಟಿ ನೀಡಿ ಪರಿಶೀಲಿಸಬೇಕು.
- ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಒಂದು ಬಾರಿ ಮಾತ್ರ ಅಂಕಪಟ್ಟಿಗೆ ಶುಲ್ಕ ಪಡೆಯಬೇಕು. ಎರಡನೇ ಬಾರಿಗೆ ಶುಲ್ಕ ವಿಧಿಸುವಂತಿಲ್ಲ. ವಾರ್ಷಿಕ ಪರೀಕ್ಷೆ 1 ರಲ್ಲಿ ತೇರ್ಗಡೆಯಾಗಿ ಎರಡನೆ, ಮೂರನೇ ಪರೀಕ್ಷೆಗೆ ಮುಂದಾಗದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲು ಕ್ರಮವಹಿಸಬೇಕು.
- ಆಯಾ ಪರೀಕ್ಷೆಗಳು ಮುಗಿದ ನಂತರ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡಬೇಕು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಮರು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಹಾಲಿ ವ್ಯವಸ್ಥೆ ಮುಂದುವರೆಸಬೇಕು.
- 2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪರೀಕ್ಷೆ-1 ಪರೀಕ್ಷೆ-2 ಮತ್ತು ಪರೀಕ್ಷೆ-3 ಎಂದು ಹೆಸರಿಸಿ ವೇಳಾಪಟ್ಟಿಗನುಗುಣವಾಗಿ ನಿಗದಿತ ಸಮಯದೊಳಗೆ ನಡೆಸಬೇಕು. ಅದಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ.
ಶಿಕ್ಷಕರ ದಿನಾಚರಣೆ ವೇಳೆ ವಿಧಾನಸೌಧದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದ್ದರು. ಅದರಂತೆ ಮೂರು ಪರೀಕ್ಷೆ ನಡೆಸಲು ಮಾರ್ಗಸೂಚಿ ರಚಿಸಲಾಗಿದ್ದು, ವಿದ್ಯಾರ್ಥಿಗಳು ಒತ್ತಡ ಮುಕ್ತರಾಗಿ ಹೆಚ್ಚಿನ ಅಂಕ ಗಳಿಸಲು ಯತ್ನಿಸಬಹುದು.
ಇದನ್ನೂ ಓದಿ:ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಲು ಪ್ರಯತ್ನ- ಸಚಿವ ಮಧು ಬಂಗಾರಪ್ಪ