ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರತಿಕ್ರಿಯೆ ಹೊಸಕೋಟೆ(ಬೆಂಗಳೂರು): ಸೂಲಿಬೆಲೆಯಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, "ಸೂಲಿಬೆಲೆ ಪಟ್ಟಣದ ವಾಲ್ಮೀಕಿ ನಗರದಲ್ಲಿ ದಿನಾಂಕ ಡಿ.11ರಂದು ವೃದ್ಧ ದಂಪತಿಗಳ ಕೊಲೆಯಾಗಿರುವ ಮಾಹಿತಿ ಪೊಲೀಸರಿಗೆ ಸಿಗುತ್ತದೆ. ಈ ಮಾಹಿತಿ ಆಧರಿಸಿ ಸೂಲಿಬೆಲೆ ಠಾಣೆಯ ಇನ್ಸ್ಪೆಕ್ಟರ್ ರವಿ ಮತ್ತು ಅವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವೃದ್ಧರು ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವೃದ್ಧ ದಂಪತಿಯ ಮಗಳು ಶಕುಂತಲಾ ಎಂಬುವವರು ತಮ್ಮ ಅಣ್ಣ ನರಸಿಂಹಮೂರ್ತಿ ಮತ್ತು ಆತನ ಹೆಂಡತಿ ಜತೆ ಸೇರಿ ಕೊಲೆ ಮಾಡಿರುವುದಾಗಿ ಆರೋಪಿ ದೂರು ನೀಡಿದ್ದರು" ಎಂದರು.
ಸೊಸೆ, ಮೊಮ್ಮಕ್ಕಳಿಂದಲೇ ಕೊಲೆ!:ಈ ಪ್ರಕರಣದ ಸಂಬಂಧ ನರಸಿಂಹಮೂರ್ತಿ ಅವರನ್ನು ವಿಚಾರಣೆ ಮಾಡಿದಾಗ ಆತ ತನ್ನ ಹೆಂಡತಿ ಮತ್ತು ಮಕ್ಕಳು ಈ ಕೊಲೆ ಮಾಡಿದ್ದಾರೆ, ಇದನ್ನು ನನ್ನ ಮುಂದೆ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆ ಕೊಡುತ್ತಾರೆ. ಈ ಮಾಹಿತಿ ಆಧರಿಸಿ ನಾವು ಭಾಗ್ಯ, ವರ್ಷ ಮತ್ತು ಬಾಲಕನೊಬ್ಬನನ್ನು ವಿಚಾರಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಭಾಗ್ಯ ತನ್ನ ಪತಿ ಮಾಡಿದ ಸಾಲವನ್ನು ತೀರಿಸಲು, ಆತನ ತಂದೆ - ತಾಯಿಯಿಂದ ಆಸ್ತಿಯ ಪಾಲನ್ನು ತೆಗೆದುಕೊಳ್ಳುವಂತೆ ಪತಿಗೆ ಒತ್ತಾಯ ಮಾಡುತ್ತಿರುತ್ತಾಳೆ. ಈ ಸಂಬಂಧ ಪತಿ ನರಸಿಂಹಮೂರ್ತಿ ತಮ್ಮ ತಂದೆ-ತಾಯಿ ಬಳಿ ಕೇಳಿದಾಗ ಅವರು ಆಸ್ತಿ ಪಾಲು ಮಾಡಿಕೊಟ್ಟಿರುವುದಿಲ್ಲ. ಈ ವೇಳೆ, ವೃದ್ಧರು ತಮ್ಮ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡುತ್ತಿದ್ದಾರೆ ಎಂಬ ಅನುಮಾನ ಅವರಿಗೆ ಬರುತ್ತದೆ. ಇದರಿಂದ ಆಕ್ರೋಶಗೊಂಡ ಭಾಗ್ಯ ತನ್ನ ಪತಿಗೆ ಆಸ್ತಿಯಲ್ಲಿ ಪಾಲು ಬರುವುದಿಲ್ಲ ಎಂದು ತನ್ನ ಮಗಳು ಮತ್ತು ಅಪ್ರಾಪ್ತ ಮಗನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ನಮ್ಮ ತನಿಖೆಯಲ್ಲಿ ತಿಳಿದು ಬಂದಿದೆ" ಎಂದರು.
"ಆರೋಪಿಗಳಾದ ಭಾಗ್ಯ, ವರ್ಷ ಹಾಗೂ ಆರೋಪಿಗಳನ್ನು ರಕ್ಷಿಸಲು ಮುಂದಾಗಿದ್ದ ನರಸಿಂಹಮೂರ್ತಿ ವಿರುದ್ಧ ಸಂಬಂಧಪಟ್ಟ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಅಪ್ರಾಪ್ತ ಬಾಲಕನನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಆಸ್ತಿ ಕಲಹ: ಹೆತ್ತ ಅಪ್ಪ-ಅಮ್ಮನನ್ನೇ ಹೊಡೆದು ಕೊಂದ ಮಗ