ಬೆಂಗಳೂರು :ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧವೂ ಕೊರೊನಾ ಭೀತಿಗೆ ನಲುಗಿದೆ. ವಿಧಾನಸಭೆ ಸಚಿವಾಲಯದ ಅಧಿಕಾರಿಗಳಿಗೆ ಇದೀಗ ಅಧಿವೇಶನ ನಡೆಸುವುದೇ ದೊಡ್ಡ ತಲೆನೋವಾಗಿದೆ. ಕೊರೊನಾ ಭೀತಿ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಧಿವೇಶನ ಬೇರೆಡೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ.
ಕೊರೊನಾ ಮಧ್ಯೆ ಸರ್ಕಾರಕ್ಕೆ ಅಧಿವೇಶನ ನಡೆಸುವ ಅನಿವಾರ್ಯತೆ ಬಂದೊದಗಿದೆ. ಸೆಪ್ಟೆಂಬರ್ನಲ್ಲಿ ಮಳೆಗಾಲದ ಅಧಿವೇಶನ ನಡೆಸಬೇಕಾಗಿದೆ. ಕೋವಿಡ್ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸುವುದು ಅಧಿಕಾರಿಗಳ ತಲೆನೋವಿಗೆ ಕಾರಣ.
ಬೇರೆಡೆ ಅಧಿವೇಶನ ನಡೆಸಲು ಚಿಂತನೆ :ವಿಧಾನಸೌಧದಲ್ಲಿ ಅಧಿವೇಶನ ನಡೆಸಿದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಸಾಧ್ಯ. ಅದರಲ್ಲೂ ವಿಧಾನಸಭೆ ಕಲಾಪ ನಡೆಸುವ ಸಭಾಂಗಣದಲ್ಲಿ ಜಾಗದ ಕೊರತೆ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ ಎಂಬುದು ಅಧಿಕಾರಿಗಳ ಆತಂಕ. ಹೀಗಾಗಿ ಬೃಹದಾಕಾರದ ಸಭಾಂಗಣ, ಆಡಿಟೋರಿಯಂನಲ್ಲಿ ಅಧಿವೇಶನ ನಡೆಸುವ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿಯೇ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ದೊಡ್ಡ ಆಡಿಟೋರಿಯಂ ಹುಡುಕಾಟದಲ್ಲಿ ತೊಡಗಿದ್ದಾರೆ. ಆ ಸಂಬಂಧ ಒಂದು ವರದಿಯನ್ನೂ ತಯಾರಿಸಿದ್ದಾರೆ.