ಕೊಚ್ಚಿ/ಬೆಂಗಳೂರು: ಕೇರಳದಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ. ಈಗಲ್ಲದಿದ್ದರೆ ಇನ್ನೆಂದೂ ಅಲ್ಲ. ಕಳೆದ 73 ವರ್ಷಗಳಿಂದ ರಾಜ್ಯವನ್ನು ಕತ್ತಲೆಯಲ್ಲಿ ಇಟ್ಟಿರುವ ಎಲ್‌ಡಿಎಫ್ ಮತ್ತು ಯುಡಿಎಫ್ ಕೂಟಗಳನ್ನು ತಿರಸ್ಕರಿಸುವ ಸಮಯ ಬಂದಿದೆ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ವಿಧಾಸಭೆ ಚುನಾವಣೆ ಹಿನ್ನೆಲೆ ಇಡುಕ್ಕಿ ಜಿಲ್ಲೆಯ ತೊಡುಪ್ಪುಳದಲ್ಲಿ ಸೋಮವಾರ ಸಂಜೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, 73 ವರ್ಷಗಳ ದುರಾಡಳಿತ ಸಾಕು. ಒಬ್ಬಾರಾದ ಮೇಲೋಬ್ಬರು ಕೇರಳವನ್ನು ಕತ್ತಲೆಯಲ್ಲಿಟ್ಟು ಹಾಳು ಮಾಡಿದ್ದು ಸಾಕು. ಇನ್ನಾದರೂ ಹೊಸ ರಾಜಕೀಯ ಶಕ್ತಿ ಉದಯಕ್ಕೆ ಅವಕಾಶ ನೀಡಿ ಎಂದು ಜನತೆಗೆ ಕರೆ ನೀಡಿದರು.
ದೇಶ ಮುಂದೆ ಹೋಗುತ್ತಿದೆ, ಕೇರಳ ಹಿಂದೆ ಬಿದ್ದಿದೆ:
ಭಾರತ ಇಂದು ನಾಗಾಲೋಟದಲ್ಲಿ ಮುಂದುವರಿಯುತ್ತಿದೆ. ಯಾರ ಊಹೆಗೂ ನಿಲುಕದಂತೆ ಇಡೀ ದೇಶವೇ ಮುಂದೆ ಹೋಗುತ್ತಿದ್ದರೆ, ಕೇರಳ ಮಾತ್ರ ಹಿಂದೆ ಬಿದ್ದಿದೆ. ಹೂಡಿಕೆಗಳಿಲ್ಲ, ಕೈಗಾರಿಕೆಗಳಿಲ್ಲ, ಉದ್ಯೋಗ ಸೃಷ್ಟಿ ಇಲ್ಲ. ಹೀಗಾದರೆ ಜನರ ಜೀವನ ಮಟ್ಟ ಸುಧಾರಿಸುವುದು ಹೇಗೆ? ಹೊಸತನವನ್ನು ಮೈಗೂಡಿಸಿಕೊಂಡು ಇತರೆ ರಾಜ್ಯಗಳಂತೆ ಪ್ರಗತಿಯತ್ತ ದಾಪುಗಾಲು ಇಡುವುದು ಹೇಗೆ? ಎಂದು ಡಿಸಿಎಂ ಪ್ರಶ್ನಿಸಿದರು.
ಕೇವಲ 6 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅದ್ಭುತಗಳನ್ನೇ ಸೃಷ್ಟಿ ಮಾಡಲಾಗಿದೆ. ಕಳೆದ 73 ವರ್ಷಗಳಲ್ಲಿ ಸಾಧ್ಯವಾಗದ್ದು, ಕೇವಲ 6 ವರ್ಷಗಳಲ್ಲಿ ಸಾಧ್ಯವಾಗಿದ್ದು ಹೇಗೆ? ಎಂಬುದನ್ನು ಒಮ್ಮೆ ಯೋಚಿಸಿ. ದೇಶಕ್ಕಾಗಿ ಚಿಂತನೆ ಮಾಡುವ ಹಾಗೂ ದೂರದೃಷ್ಟಿಯುಳ್ಳ ಸಮರ್ಥ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಇಡೀ ಜಗತ್ತೇ ಭಾರತದಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಕಂಡು ಬೆರಗಾಗಿದೆ ಎಂದು ಡಿಸಿಎಂ ಪ್ರತಿಪಾದಿಸಿದರು.