ಬೆಂಗಳೂರು:ರಾಜ್ಯ ಬಿಜೆಪಿ ಉಸ್ತುವಾರಿ ನೇತೃತ್ವದಲ್ಲಿ ಇಂದು ಸಂಜೆ ಸಚವರೊಂದಿಗೆ ನಡೆದ ಸಭೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಇಂದಿನ ಸಭೆಯಲ್ಲಿ ಅದರ ಚರ್ಚೆಯೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆಗಿನ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಮ್ಮುಖದಲ್ಲಿ ಇಂದು ಸಚಿವರ ಸಭೆ ನಡೆದಿದೆ. ಸೇವಾಹಿ ಸಂಘಟನೆ ಕುರಿತು ಸರ್ಕಾರದ ಕಡೆಯಿಂದ ಆಗಿರುವ ಕೆಲಸದ ವಿವರವನ್ನು ಸಭೆಯಲ್ಲಿ ನೀಡಲಾಯಿತು. ಸರ್ಕಾರ, ಸಂಘಟನೆ ಉತ್ತಮವಾಗಿ ಕೆಲಸ ಮಾಡಿದೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ ಎಂದರು.
ಸಚಿವರು ವಾರಕ್ಕೊಮ್ಮೆ ಸಚಿವಾಲಯದಲ್ಲಿರಬೇಕು, ಕಾರ್ಯಕರ್ತರು, ಶಾಸಕರ ಅಹವಾಲು ಸ್ವೀಕರಿಸಿ ಪರಿಹಾರ ನೀಡಬೇಕು. ಜಿಲ್ಲೆಗಳಲ್ಲಿ ಶಾಸಕರನ್ನು ಇರಿಸಿಕೊಂಡು ಅಧಿಕಾರಿಗಳ ಸಭೆ ನಡೆಸಬೇಕು. ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಇಲಾಖಾ ಯೋಜನೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಯೋಜನೆಗಳನ್ನು ಸಂಘಟನೆ ಮೂಲಕ ಮತಗಟ್ಟೆ ಮಟ್ಟಕ್ಕೆ ಮುಟ್ಟಿಸಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ಮುಖಂಡರು ಮಾಡಬೇಕು. ಸರ್ಕಾರ ಹೊಸ ಹೊಸ ಯೋಜನೆ ತರಬೇಕು. ಕೇಂದ್ರ ಯೋಜನೆಗಳು ಮನೆ ಮನೆಗೆ ತಲುಪುವಂತೆ ರಾಜ್ಯದಲ್ಲಿಯೂ ಸಹ ಈ ಕೆಲಸ ಆಗಬೇಕು ಎಂದು ರಾಜ್ಯ ಉಸ್ತುವಾರಿ ಸಲಹೆಗಳನ್ನು ನೀಡಿರುವ ಬಗ್ಗೆ ಕಟೀಲ್ ವಿವರಿಸಿದರು.
ಓದಿ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ; ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ