ಬೆಂಗಳೂರು:ಮನೆಗೆ ನೀರು ನುಗ್ಗಿ ರೈನ್ ಬೋ ಲೇಔಟ್ ಜನರು ಪರದಾಡುತ್ತಿದ್ದಾರೆ. ಆದ್ರೆ ಇಲ್ಲೊಂದು ಕಳ್ಳರ ಗುಂಪು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ನೆರೆ ಬಂದ ಮನೆಗಳಿಗೆ ಕನ್ನ ಹಾಕುತ್ತಿದ್ದಾರೆ.
ಹೌದು, ಕಳ್ಳರು ನೀರು ನುಗ್ಗಿರುವ ಮನೆಯಲ್ಲಿ ಕಳ್ಳತನ ಮಾಡ್ತಿದ್ದಾರೆ. ಮಳೆಯಿಂದ ಮುಳುಗಡೆಗೊಂಡಿದ್ದ ರೈನ್ಬೋ ಲೇಔಟ್ನಲ್ಲಿ ಸರಣಿ ಕಳ್ಳತನವಾಗಿದ್ದು, ಮೂರು ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣ ದೋಚಿರುವ ಕಳ್ಳರಿಗೆ ಮನೆಯವರು ಹಿಡಿಶಾಪ ಹಾಕಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇನ್ನು, ಮಳೆಯಿಂದಾಗಿ ಇಡೀ ಲೇಔಟ್ನಲ್ಲಿ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ. ಮಳೆ ಹಿನ್ನೆಲೆ ಇಡೀ ಲೇಔಟ್ನಲ್ಲಿ ಕರೆಂಟ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಅಭಾವದಿಂದ ಸಿಸಿಟಿವಿ ಕೂಡ ತಮ್ಮ ಕಾರ್ಯವನ್ನು ನಿಲ್ಲಿಸಿವೆ. ಸಾಲದಕ್ಕೆ ಸಾಕಷ್ಟು ಜನ ಮನೆ ಬಿಟ್ಟು ಬೇರೆಡೆ ತಾತ್ಕಾಲಿಕವಾಗಿ ವಾಸವಾಗಿದ್ದಾರೆ.
ಇದೇ ಸಮಯವನ್ನು ನೋಡಿಕೊಂಡು ಖದೀಮರ ಗುಂಪು ಈ ಕೃತ್ಯವೆಸಗಿದೆ. ನೀರು ನುಗ್ಗಿ ಕಾಂಪೌಂಡ್ ಕೂಡ ಬಿದ್ದಿದ್ದ ಮನೆಗೆ ಬಂದು ಕಳ್ಳತನ ಮಾಡಿದ್ದಾರೆ. ಕುಟುಂಬಸ್ಥರು ತಮ್ಮ ಮನೆಗೆ ವಾಪಸ್ ಬಂದು ನೋಡಿದಾಗ ಈ ಕೃತ್ಯ ಬಯಲಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬೆಳ್ಳಂದೂರು ಪೊಲೀಸರು ಬಲೆ ಬೀಸಿದ್ದಾರೆ.
ಓದಿ:ಮೂರು ಮನೆಗಳಲ್ಲಿ ಕಳವು, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳ!