ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡಣೆ ಮತ್ತು ಮೀಸಲು ಸಂಬಂಧ ಹೊರಡಿಸಿದ್ದ ಅಧಿಸೂಚನೆಗಳನ್ನು ಹಿಂಪಡೆಯಲು ವಿಳಂಬವಾಗಿದ್ದಕ್ಕೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಷಮೆ ಯಾಚಿಸಿ ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಗುರುನಾಥ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಪ್ರಮಾಣ ಪತ್ರ ಸಲ್ಲಿಸಲಾಗಿದೆ.
ವಿಚಾರಣೆ ವೇಳೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಸಿದ್ದಪಡಿಸಿದ್ದ ಪ್ರಮಾಣ ಪತ್ರವನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ಅಲ್ಲದೆ ಪಾಲಿಕೆಗೆ ಶೀಘ್ರವೇ ಚುನಾವಣೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕುರಿತು ಹೈಕೋರ್ಟ್ ನೀಡುವ ಯಾವುದೇ ನಿರ್ದೇಶನಗಳಿಗೆ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.
ಪ್ರಮಾಣ ಪತ್ರ ದಾಖಲಿಸಿಕೊಂಡ ಪೀಠ ಬಿಬಿಎಂಪಿ ಚುನಾವಣೆ ಕುರಿತಂತೆ ಸಲ್ಲಿಸಿರುವ ಅರ್ಜಿಯ ತೀರ್ಪು ಪ್ರಕಟಿಸಿದ ಬಳಿಕ ಈ ಅರ್ಜಿಯ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಸಂಬಂಧ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ 2018 ರಲ್ಲಿ ತಡೆ ನೀಡಿದ್ದರಿಂದ ಅವುಗಳನ್ನು ಹಿಂಪಡೆಯುವುದಾಗಿ ಸರ್ಕಾರ ತಿಳಿಸಿತ್ತು.
2019ರಲ್ಲಿ ಪಾಲಿಕೆಯ ಅವಧಿ ಮುಗಿದು ಚುನಾವಣೆ ನಡೆಸಬೇಕಾಗಿ ಬಂದಾಗಲೂ ಅಧಿಸೂಚನೆ ಹಿಂಪಡೆಯದ ಸರ್ಕಾರ ಆಡಳಿತಾಧಿಕಾರಿ ನೇಮಿಸಿ, ಅವರನ್ನೇ ಮುಂದುವರಿಸಿಕೊಂಡು ಬಂದಿತ್ತು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬಳಿಕ ವಾದ ಮಂಡಿಸಿದ್ದ ಸರ್ಕಾರ, ಅಧಿಸೂಚನೆಗಳನ್ನು ಹಿಂದಿನ ದಿನವಷ್ಟೇ ಹಿಂಪಡೆದಿರುವುದಾಗಿ ತಿಳಿಸಿತ್ತು. ಕೋರ್ಟ್ ಆದೇಶವನ್ನು ಸರ್ಕಾರ ಏಕೆ ಪಾಲಿಸಿರಲಿಲ್ಲ ಹಾಗೂ ಅಧಿಸೂಚನೆಗಳನ್ನು ಹಿಂಪಡೆದ ವಿಚಾರವನ್ನು ಮೊದಲೇ ಏಕೆ ತಿಳಿಸಲಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ವಿಭಾಗೀಯ ಪೀಠ ಈ ಕುರಿತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿತ್ತು.