ಬೆಂಗಳೂರು:ನಗರದಲ್ಲಿ 10ಕ್ಕೂ ಹೆಚ್ಚು ಬೈಕ್ಗಳನ್ನು ಕಳ್ಳತನ ಮಾಡಿ ರಾಜಾರೋಷವಾಗಿ ಓಡಾಡಿಕೊಂಡಿದ್ದ ಖದೀಮನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ರೋಹಿತ್ ಅಲಿಯಾಸ್ ಕ್ಯಾಟ್ ಬಂಧಿತ ಆರೋಪಿ. ಈತ 10 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ. ಈ ಸಂಬಂಧ ನಗರದ ಹಲವೆಡೆ ಪ್ರಕರಣ ದಾಖಲಾಗಿತ್ತು. ಖದೀಮನ ಸೆರೆ ಹಿಡಿಯಲು ತನಿಖೆಗಿಳಿದ ಪೊಲೀಸರಿಗೆ ಒಬ್ಬನೇ ಸರಣಿ ಕಳ್ಳತನ ಮಾಡಿರುವ ಕುರಿತು ತಿಳಿದಿದೆ. ಯಾವುದೋ ಕಾರಣಕ್ಕೆ ಗಸ್ತಿನಲ್ಲಿ ವಾಹನ ಪರಿಶೀಲನೆ ಮಾಡುತ್ತಿದ್ದ ಪೊಲೀಸರಿಗೆ ಆಕಸ್ಮಿಕವಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.
13 ವಾಹನಗಳನ್ನು ಎಗರಿಸಿದ್ದ ಖದೀಮ ಪತ್ತೆ ಮಾಡಿದ್ದು ಹೇಗೆ?
ಇದೇ ತಿಂಗಳ 1ನೇ ತಾರೀಖು ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿ ಶೆಟ್ಟಿಹಳ್ಳಿ ರೈಲ್ವೆ ಗೇಟ್ ಬಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ರೋಹಿತ್ನನ್ನು ಹಿಡಿದು ವಾಹನದ ದಾಖಲಾತಿ ಕೇಳಿದ್ದಾರೆ. ಆರೋಪಿ ಬಳಿ ಯಾವುದೇ ದಾಖಲೆ ಇರಲಿಲ್ಲ. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 13 ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿ ಹೋಂಡಾ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಪೀಣ್ಯ-2, ಚಂದ್ರಾ ಲೇಔಟ್- 1, ಜ್ಞಾನ ಭಾರತಿ-2, ಸೋಲದೇವನಹಳ್ಳಿ- 1, ಗಂಗಮ್ಮನಗುಡಿ-1, ತುಮಕೂರು-1, ತಾವರೆಕೆರೆ-1, ಕುಂಬಳಗೋಡು-2, ಮೈಸೂರು ವಿಜಯನಗರ-2 ಸೇರಿದಂತೆ ಒಟ್ಟು 13 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿಯಿಂದ 4.5 ಲಕ್ಷ ರೂ. ಮೌಲ್ಯದ 10 ವಾಹನ ವಶಕ್ಕೆ ಪಡೆದು, ಇನ್ನುಳಿದ ವಾಹನಗಳಿಗಾಗಿ ಪೊಲೀಸರಿಂದ ಶೋಧ ಮುಂದುವರೆದಿದೆ.