ಬೆಂಗಳೂರು : ಹಳೆ ಮೈಸೂರು ಭಾಗವು ಮೂರು ಪಕ್ಷಗಳಿಗೆ ನಿರ್ಣಾಯಕ ಚುನಾವಣಾ ಅಖಾಡ. ಒಕ್ಕಲಿಗ ಪ್ರಾಬಲ್ಯ ಇರುವ ಈ ಪ್ರದೇಶದಲ್ಲಿ ಮೇಲುಗೈ ಸಾಧಿಸಿದರೆ ರಾಜ್ಯದ ಗದ್ದುಗೆ ಹಿಡಿಯಲು ಹಾದಿ ಸುಗಮವಾಗುತ್ತದೆ. ಹಳೆ ಮೈಸೂರು ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರೂ ಪಕ್ಷಗಳು ಕಸರತ್ತು ನಡೆಸುತ್ತಿವೆ. ಅಷ್ಟಕ್ಕೂ ಹಳೆ ಮೈಸೂರಿನ ರಾಜಕೀಯ ಸ್ಥಿತಿಗತಿ ಏನಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಹಳೆ ಮೈಸೂರು ಇದೀಗ ಮೂರೂ ಪಕ್ಷಗಳ ಟಾರ್ಗೆಟ್ ಅಖಾಡ. ಚುನಾವಣೆಯಲ್ಲಿ ಹಳೆ ಮೈಸೂರು ಜನರ ಪ್ರೀತಿ ಪಾತ್ರವಾಗಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಮ್ಮದೇ ಆದ ರೀತಿಯಲ್ಲಿ ಚುನಾವಣಾ ರಣತಂತ್ರ ರೂಪಿಸುತ್ತಿವೆ. ಹಳೆ ಮೈಸೂರು ಭಾಗ ರಾಜಕೀಯ ಪಕ್ಷಗಳಿಗೆ ನಿರ್ಣಾಯಕ ಅಖಾಡವಾಗಿದೆ. ಹಳೆ ಮೈಸೂರು ಒಕ್ಕಲಿಗ ಸಮುದಾಯ ಪ್ರಾಬಲ್ಯದ ಪ್ರದೇಶವಾಗಿದೆ. ಹಾಗಾಗಿ ಒಕ್ಕಲಿಗರ ಮತ ಬ್ಯಾಂಕ್ ಸೆಳೆಯಲು ಮೂರು ಪಕ್ಷಗಳು ಹಲವು ಕಸರತ್ತು ನಡೆಸುತ್ತಿವೆ. ರಾಜ್ಯದ ಗದ್ದುಗೆ ಹಿಡಿಯುವಲ್ಲಿ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸುವುದು ನಿರ್ಣಾಯಕವಾಗಿದೆ.
ಹಳೆ ಮೈಸೂರು ಭಾಗವು ಸುಮಾರು 60 ಕ್ಷೇತ್ರಗಳನ್ನು ಹೊಂದಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರಗಳಲ್ಲಿ ಜೆಡಿಎಸ್ ನದ್ದೇ ಪಾರುಪತ್ಯ. ಸಾಮಾನ್ಯವಾಗಿ ರಾಜಕೀಯವಾಗಿ ನಿರ್ಣಾಯಕವಾಗಿರುವ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇರುತ್ತದೆ. ಆದರೆ, ಇತ್ತೀಚಿಗಿನ ವರ್ಷಗಳಲ್ಲಿ ಬಿಜೆಪಿ ಕೂಡ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಿದ್ದು, ಬಲ ವೃದ್ಧಿಸುತ್ತಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ 2023 ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಖಚಿತವಾಗಿದೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಮೂರೂ ಪಕ್ಷಗಳು ತಮ್ಮದೇ ಆದ ಚುನಾವಣಾ ತಂತ್ರಗಾರಿಕೆ ನಡೆಸುತ್ತಿವೆ.
ಹಳೆ ಮೈಸೂರು ಚುನಾವಣಾ ರಾಜಕಾರಣ ಹೇಗಿದೆ?: ಹಳೆ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ತನ್ನದೇ ಆದ ರಣತಂತ್ರ ರೂಪಿಸುತ್ತಿದೆ. ಹಳೆ ಮೈಸೂರು ಸಾಂಪ್ರದಾಯಿಕವಾಗಿ ಜೆಡಿಎಸ್ ಪಕ್ಷದ ಭದ್ರ ಕೋಟೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಖಾಡವಾಗಿದೆ. ಹಳೆ ಮೈಸೂರು ಭಾಗ ಮೈಸೂರು, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಕೊಡಗು ಹಾಗೂ ತುಮಕೂರಿನ ಕೆಲ ಭಾಗಗಳನ್ನು ಒಳಗೊಂಡಿದೆ.
ಈ ಹಿಂದಿನ ಅಂಕಿ- ಅಂಶಗಳನ್ನು ಗಮನಿಸುವುದಾದರೆ:2013ರಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ 25 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಅದೇ ಕಾಂಗ್ರೆಸ್ ಪಕ್ಷ ಸುಮಾರು 27 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇನ್ನು ಬಿಜೆಪಿ 8 ಸ್ಥಾನಗಳಲ್ಲಿ ಗೆದ್ದಿತ್ತು. 2013ರ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಶೇ 38ರಷ್ಟು ಮತ ಪಾಲು ಪಡೆದಿತ್ತು. ಇನ್ನು ಜೆಡಿಎಸ್ ಶೇ 34ರಷ್ಟು ಮತ ಪಾಲು ಗಳಿಸಿತ್ತು. ಬಿಜೆಪಿ ಸುಮಾರು 10-13ರಷ್ಟು ಮತ ಬ್ಯಾಂಕ್ ಗಳಿಸಿತ್ತು. ಕೆಜೆಪಿ ಶೇ 9ಕ್ಕೂ ಹೆಚ್ಚು ಮತ ಪಾಲು ಪಡೆದಿತ್ತು.
2018ರಲ್ಲಿ ಜೆಡಿಎಸ್ ಪಕ್ಷ ಸುಮಾರು 31 ಸ್ಥಾನ ಗೆದ್ದು, ತನ್ನ ಹಿಡಿತವನ್ನು ಸದೃಢಗೊಳಿಸಿತ್ತು. ಕಾಂಗ್ರೆಸ್ ಪಕ್ಷ ಸುಮಾರು 19 ಸ್ಥಾನಕ್ಕೆ ಕುಸಿತ ಕಂಡಿತ್ತು. ಬಿಜೆಪಿ 10 ಸ್ಥಾನ ಗೆದ್ದು ಉತ್ತಮ ಪ್ರದರ್ಶನ ನೀಡಿತ್ತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಜೆಡಿಎಸ್ ವರಿಷ್ಠ ದೇವೆಗೌಡರನ್ನು ತೀವ್ರವಾಗಿ ಟೀಕಿಸಿರುವುದು ಕಾಂಗ್ರೆಸ್ಗೆ ಹಿನ್ನಡೆಯಾಯಿತು. ಸಿದ್ದರಾಮಯ್ಯ ಅವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಯಿತು. ಇತ್ತ ಎರಡು ಕ್ಷೇತ್ರ ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಗೆದ್ದು ಬೀಗಿದ್ದರು. ಇನ್ನು ಹಳೆ ಮೈಸೂರಿನಲ್ಲಿ ದುರ್ಬಲವಾಗಿರುವ ಬಿಜೆಪಿ 2018ರ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿಸಿತು. ಅದಕ್ಕೆ ಮೋದಿ- ಶಾ ಪ್ರಮುಖ ಕಾರಣ ಎಂದು ಹೇಳಬಹುದು.