ಬೆಂಗಳೂರು:ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆಗೆ ಒಳಪಟ್ಟ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ದರ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ (ಮೃತ ದಾನಿಯಿಂದ ಶ್ವಾಸಕೋಶ ಕಸಿ)15 ಲಕ್ಷ ರೂ. ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ. ಇನ್ನು ಹೃದಯ ಮತ್ತು ಶ್ವಾಸಕೋಶದ ಕಸಿ ಶಸ್ತ್ರ ಚಿಕಿತ್ಸೆಗಾಗಿ 15 ಲಕ್ಷ ರೂ + ಶ್ವಾಸಕೋಶ ಕಸಿ ಶುಲ್ಕದ ಶೇ 50ರಷ್ಟು ಪ್ಯಾಕೇಜ್ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಶ್ವಾಸಕೋಶದ ಕಸಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ ಸರ್ಕಾರಿ ನೌಕರರು ಚಿಕಿತ್ಸಾ ವೆಚ್ಚ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಸಿ.ಜಿ.ಹೆಚ್.ಎಸ್. ದರಪಟ್ಟಿಯಲ್ಲಿ ದರವನ್ನು ನಿಗದಿಪಡಿಸಿಲ್ಲ. ಆದರೆ, ಮಾರಣಾಂತಿಕ ಕಾಯಿಲೆಯಂತಹ ಪ್ರಕರಣಗಳಲ್ಲಿ ದುಬಾರಿ ವೆಚ್ಚವನ್ನು ಸರ್ಕಾರಿ ನೌಕರರು ಭರಿಸಬೇಕಾಗಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಿಗೆ ಈ ಸಂಬಂಧ ಒಂದು ತಜ್ಞರ ಸಮಿತಿಯನ್ನು ರಚಿಸಿ, ಶ್ವಾಸಕೋಶ ಕಸಿ ಶಸ್ತ್ರ ಚಿಕಿತ್ಸೆಗೆ ಪ್ಯಾಕೇಜ್ ದರವನ್ನು ನಿಗದಿಪಡಿಸುವಂತೆ ಕೋರಲಾಗಿತ್ತು.