ಬೆಂಗಳೂರು:ರಾಜ್ಯದ ಹಾಲಿ ಸಂಸದರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ಲೋಕಸಮರದ ರಣಕಣಕ್ಕೆ ಇಳಿದಿದ್ದಾರೆ. ಅದಕ್ಕಾಗಿ ಅಖಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ಹಾಲಿ ಸಂಸದರು ಹಾಗೂ ಅವರ ಪತ್ನಿಯಂದಿರ ಆಸ್ತಿ ಮೌಲ್ಯ ಕಳೆದ ಲೋಕಸಮರಕ್ಕಿಂತ ಈ ಬಾರಿ ಎಷ್ಟು ಹೆಚ್ಚಾಗಿದೆ ಎಂಬ ಕೆಲ ಇಂಟ್ರೆಸ್ಟಿಂಗ್ ಅಂಶಗಳನ್ನು ನಿಮ್ಮ ಮುಂದಿಡುತ್ತೇವೆ.
ರಾಜ್ಯದಲ್ಲಿ ಬಹುತೇಕ ಎಲ್ಲ ಹಾಲಿ ಸಂಸದರು ಮತ್ತೊಮ್ಮೆ ಆಯ್ಕೆ ಬಯಸಿ ಲೋಕಸಮರದ ಅಖಾಡಕ್ಕೆ ಇಳಿದಿದ್ದಾರೆ. ಬಹುತೇಕ ಎಲ್ಲಾ ಹಾಲಿ ಸಂಸದರು ಕೋಟ್ಯಧಿಪತಿಗಳೇ. ಆದರೆ ಕೆಲ ಸಂಸದರಗಿಂತ ಅವರ ಪತ್ನಿಯರೇ ಶ್ರೀಮಂತರಾಗಿದ್ದಾರೆ. ಇನ್ನು ಕೆಲ ಸಂಸದರು ತಮ್ಮ ಐದು ವರ್ಷದ ಅಧಿಕಾರವಧಿಯಲ್ಲಿ ತಮ್ಮ ಆಸ್ತಿ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಕೆಲ ಸಂಸದರ ಆಸ್ತಿ ಮೌಲ್ಯ 2014ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಆದರೆ, ಅವರ ಪತ್ನಿಯಂದಿರ ಆಸ್ತಿ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡಿದೆ. ಇಂಥ ಕೆಲ ಸ್ವಾರಸ್ಯಕರ ಅಂಶಗಳನ್ನು ನೋಡೋಣ.
ಯಾರ ಆಸ್ತಿ ಎಷ್ಟು ವೃದ್ಧಿ?:
- ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ ವೃದ್ಧಿಯಲ್ಲಿ ಅಗ್ರಗಣ್ಯರು. 2014ಕ್ಕೆ ಹೋಲಿಸಿದರೆ ಈ ಬಾರಿ ಡಿ.ಕೆ. ಸುರೇಶ್ ಆಸ್ತಿ ಮೌಲ್ಯದಲ್ಲಿ ಭಾರಿ ಏರಿಕೆ ಕಂಡಿದೆ. 2014ರಲ್ಲಿ ಡಿ.ಕೆ.ಸುರೇಶ್ 162 ಕೋಟಿ ರೂ. ಒಟ್ಟು ಚರಾಸ್ತಿ ಹಾಗೂ ಚಿರಾಸ್ತಿ ಘೋಷಿಸಿದ್ದರು. ಐದು ವರ್ಷದ ಬಳಿಕ ಈಗ ಆ ಆಸ್ತಿ ಮೌಲ್ಯ ಸುಮಾರು 338 ಕೋಟಿಗೆ ಏರಿಕೆ ಕಂಡಿದೆ.
- ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಆಸ್ತಿ ಮೌಲ್ಯವೂ ಗಣನೀಯ ಏರಿಕೆ ಕಂಡಿದೆ. 2014ರಲ್ಲಿ ಡಿವಿಎಸ್ ಆಸ್ತಿ ಒಟ್ಟು 8.11 ಕೋಟಿ ಆಗಿತ್ತು. ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 1.76 ಕೋಟಿ ಇತ್ತು. 2019ರಲ್ಲಿ ಸದಾನಂದ ಗೌಡರ ಆಸ್ತಿ ಮೌಲ್ಯ 33.09ಕೋಟಿ ರೂ.ಗೆ ವೃದ್ಧಿಸಿದೆ. ಅವರ ಪತ್ನಿಯ ಆಸ್ತಿ ಮೌಲ್ಯ 3.60 ಕೋಟಿಗೆ ಏರಿಕೆಯಾಗಿದೆ.
- ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಯಲ್ಲಿ ಅಲ್ಪಏರಿಕೆ ಕಂಡಿದೆ ಅಷ್ಟೇ. 2014ರಲ್ಲಿ ಖರ್ಗೆಯವರ ಒಟ್ಟು ಆಸ್ತಿ ಮೌಲ್ಯ ಸುಮಾರು 5.24 ಕೋಟಿ ರೂ. ಇತ್ತು. ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 4.86 ಕೋಟಿ ಆಗಿತ್ತು. ಅದೇ 2019 ರಲ್ಲಿ ಖರ್ಗೆಯವರ ಆಸ್ತಿ ಮೌಲ್ಯದಲ್ಲಿ 7.38 ಕೋಟಿ ರೂ. ಏರಿಕೆಯಾಗಿದೆ. ಪತ್ನಿ ಆಸ್ತಿ ಮೌಲ್ಯ 7.13 ಕೋಟಿ ರೂ. ವೃದ್ಧಿಯಾಗಿದೆ.
- ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಸ್ತಿ ಮೌಲ್ಯ 7.35 ಕೋಟಿ ರೂ.ನಿಂದ 10.48 ಕೋಟಿ ರೂ.ಗೆ ವೃದ್ಧಿಸಿದೆ.