ಬೆಂಗಳೂರು:''ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯು ನಿಗದಿತ ಸಮಯಕ್ಕೂ ತಡವಾಗಿ ಆರಂಭವಾಗಲಿದೆ'' ಎಂದು ನಮ್ಮ ಮೆಟ್ರೋ ಮೂಲಗಳಿಂದ ತಿಳಿದು ಬಂದಿದೆ.
ಎಲೆಕ್ಟ್ರಾನಿಕ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ಇತರ ಭಾಗಗಳನ್ನು ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವು ಮುಂದಿನ ವರ್ಷ ಫೆಬ್ರವರಿಗೆ 2024ಕ್ಕೆ ವಾಣಿಜ್ಯ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಲಾಗಿದ್ದು, ಇದರ ಸಲುವಾಗಿ ಚೀನಾದಿಂದ ಅಗತ್ಯ ಬೋಗಿಗಳನ್ನು ಸ್ವೀಕರಿಸಲಾಗಿತ್ತು. ಜೊತೆಗೆ ಚೀನಾದಿಂದ ನಮ್ಮ ಮೆಟ್ರೋ ಸಿಬ್ಬಂದಿಗೆ ಅಗತ್ಯ ತಾಂತ್ರಿಕ ಸಲಹೆ, ತರಬೇತಿ ನೀಡುವ ಸಲುವಾಗಿ ನಮ್ಮ ಮೆಟ್ರೋ ಬೋಗಿ ಪೂರೈಸುವ ಕಂಪನಿ ಸಿಬ್ಬಂದಿಗೆ ಭಾರತ ವೀಸಾ ನೀಡಿದೆ. ಹೀಗಿದ್ದರೂ ಸಹ ನಮ್ಮ ಮೆಟ್ರೋ ಹಳದಿ ಮಾರ್ಗವು ನಾಲ್ಕು ಐದು ತಿಂಗಳುಗಳ ಕಾಲ ತಡವಾಗಬಹದು ಎಂದು ಅಂದಾಜಿಸಲಾಗುತ್ತಿದೆ.
ಹಳದಿ ಮಾರ್ಗದಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವು ಮೂರು ತಿಂಗಳ ಬಳಿಕ ಆಗುವ ನಿರೀಕ್ಷೆಯಿದೆ. ಆದರೆ ಸಿಗ್ನಲಿಂಗ್ ಹಾಗೂ ಇತರೆ ತಾಂತ್ರಿಕ ಪರಿಶೀಲನೆ ಪೂರ್ಣವಾಗುವಾಗ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರವು ಮತ್ತಷ್ಟು ವಿಳಂಬವಾಗಲಿದೆ. ಸಾರ್ವತ್ರಿಕ ಚುನಾವಣೆ ಬಳಿಕ ಹಳದಿ ಮಾರ್ಗ ಪ್ರಯಾಣಿಕರಿಗೆ ಮುಕ್ತವಾಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಪ್ರಾಯೋಗಿಕ ಪರೀಕ್ಷೆ ಸಲುವಾಗಿ ಈಗಾಗಲೇ ಆರು ಬೋಗಿಗಳ ರೈಲು ಸಿದ್ಧವಾಗಿದೆ. ಚೀನಾದಿಂದ ಸ್ವೀಕರಿಸಲಾದ ಮೆಟ್ರೋ ಬೋಗಿಗಳನ್ನು ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಅನುಮೋದನೆ ಪಡೆಯಲು ಮೂರು ತಿಂಗಳುಗಳು ಬೇಕಾಗಲಿದೆ. ಅನುಮೋದನೆ ದೊರೆತ ಬಳಿಕ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಎಂದು ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್ ಹೇಳಿದ್ದಾರೆ.
ರೈಲು ಹಳಿಯಲ್ಲಿನ ಎದುರಾಗಿದ್ದ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆ ಆರಂಭ:ರೈಲು ಹಳಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಸಂಚಾರ ಸ್ಥಗಿತಗೊಂಡಿದ್ದನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮೊದಲಿನ ರೀತಿಯೇ ಸೇವೆ ಪ್ರಾರಂಭಿಸಿದೆ. ಈ ಬಗ್ಗೆ ಬಿ.ಎಂ.ಆರ್.ಸಿ.ಎಲ್ ಪ್ರಕಟಣೆ ನೀಡಿದೆ. ರೈಲು ಹಳಿಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಇದರಿಂದ ಪೀಣ್ಯದಿಂದ ನಾಗಸಂದ್ರಕ್ಕೆ ಮೆಟ್ರೋ ಸಂಚಾರ ಸೇವೆಯಲ್ಲಿ ತೊಂದರೆ ಉಂಟಾಗಿತ್ತು. ಯಶವಂತಪುರ- ಸಿಲ್ಕ್ ಇನ್ಸ್ಟಿಟ್ಯೂಟ್ ತನಕ ಮಾತ್ರ ಮೆಟ್ರೋ ಸಂಚಾರ ಇತ್ತು. ಡಿ.15ರಂದು ಬೆಳಿಗ್ಗೆ 10.18 ರಿಂದ 10.50 ರವರೆಗೆ ನಮ್ಮ ಮೆಟ್ರೋ ರೈಲು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ನಂತರ ರೈಲು ಹಳಿಯ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ. ಸದ್ಯ ಯಥಾಸ್ಥಿತಿಗೆ ಮರಳಿದೆ. ಈ ಹಿನ್ನೆಲೆ ಬೆಳಗ್ಗೆ 10.50 ರ ನಂತರ ಎಂದಿನಂತೆ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿತ್ತು ಎಂದು ನಮ್ಮ ಮೆಟ್ರೋ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ನಮ್ಮ ಮೆಟ್ರೋದಿಂದ ಮತ್ತೊಂದು ಸುರಂಗ ಕೊರೆಯುವ ಕಾರ್ಯಾಚರಣೆ ಯಶಸ್ವಿ