ಬೆಂಗಳೂರು: ಎನ್‌ಇಪಿ 2020 ತತ್ವಶಾಸ್ತ್ರವಾಗಿದ್ದು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್.ಸಿ.ಎಫ್) ಒಂದು ಮಾರ್ಗವಾಗಿದೆ. 34 ವರ್ಷದ ಬಳಿಕ ಹೊಸ ಶಿಕ್ಷಣ ವ್ಯವಸ್ಥೆ ಬರುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಐಐಎಸ್ಸಿಯಲ್ಲಿ ನಡೆದ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನ (ಎನ್.ಸಿ.ಎಫ್) ದಾಖಲೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ದಾಖಲೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಕೌಶಲ್ಯ ಅಭಿವೃದ್ಧಿ, ಉಪನ್ಯಾಸಕರ ಪಾತ್ರ, ಮಾತೃ ಭಾಷೆ ಕಲಿಕೆಗೆ ಆದ್ಯತೆ ನೀಡಲಿದೆ. ಕಡಿಮೆ ಸಮಯದಲ್ಲಿ ನಮ್ಮ ಟೀಂ ವೈಜ್ಞಾನಿಕ ಪಠ್ಯಪುಸ್ತಕದ ಚೌಕಟ್ಟನ್ನು ರೂಪಿಸಿದೆ. ಅನೇಕ ಸಮಾಲೋಚನೆ, ಭಾಗೀದಾರಿಕೆ ಮೂಲಕ ಎನ್ ಇಪಿ ಪಠ್ಯಪುಸ್ತಕದ ಚೌಕಟ್ಟನ್ನು ರೂಪಿಸಲಾಗಿದೆ. ಇದರಿಂದ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಅಂಗನವಾಡಿ, ಪ್ಲೇ ಸ್ಕೂಲ್ಗೆ ಕಳುಹಿಸಲು ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ಸಮಾನತೆ ಎನ್‌ಇಪಿ ತರಲಿದೆ ಎಂದರು.