ಬೆಂಗಳೂರು:ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 190ನೇ ಹುತಾತ್ಮ ದಿನಾಚರಣೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಣ ನೀತಿಯಲ್ಲಿ ದೇಶ ಕಟ್ಟುವ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಕಲಿಕೆಯ ಹಂತದಲ್ಲೇ ರೂಪಿಸುವ ಅಂಶಗಳನ್ನು ಆದ್ಯತೆಯ ಮೇರೆಗೆ ಸೇರಿಸಲಾಗಿದೆ. ಇದಕ್ಕೆ ಪೂರಕವಾಗಿ ಮೌಲ್ಯಾಧಾರಿತ ಅಂಶಗಳೂ ಇದ್ದು, ಇವುಗಳ ಆಧಾರದ ಮೇಲೆಯೇ ನೂತನ ಶಿಕ್ಷಣ ನೀತಿ ರೂಪಿತವಾಗಿದೆ. ಈ ವರ್ಷದಿಂದಲೇ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ ಎಂದರು.
ಸಂಗೊಳ್ಳಿ ರಾಯಣ್ಣ ಅವರು ನಮ್ಮ ಅಂತರಾತ್ಮದ ಧ್ವನಿ. ನಿರಂತರ ಸ್ಫೂರ್ತಿ. ಅವರ ಕೆಚ್ಚು, ಅರ್ಪಣಾ ಮನೋಭಾವ, ದೇಶ ಭಕ್ತಿ ನಮಗೆಲ್ಲರಿಗೂ ಆದರ್ಶ. ತಾಯ್ನಾಡಿಗಾಗಿ ಹೋರಾಡುತ್ತಲೇ ಸಾವನ್ನು ತೃಣ ಸಮಾನವಾಗಿ ಕಂಡ ಆ ಮಹಾಪುರುಷನ ಬಗ್ಗೆ ನಾವು ಆರಾಧನಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಮಕ್ಕಳು ರಾಯಣ್ಣರಂಥ ಮಹಾಪುರುಷರಿಂದ ಪ್ರಭಾವಿತರಾಗಬೇಕು ಎಂದು ಉಪ ಮುಖ್ಯಮಂತ್ರಿ ಪ್ರತಿಪಾದಿಸಿದರು.