ಬೆಂಗಳೂರು: ಲಾಕ್‍ಡೌನ್ ವೇಳೆ ವೈನ್ಶಾಪ್ಗಳಲ್ಲಿ ಮದ್ಯ ಮಾರಾಟಕ್ಕೆ ದಿನದ ಕೆಲವು ಗಂಟೆಗಳ ಕಾಲ ಅವಕಾಶ ನೀಡುವಂತೆ ಮನವಿ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ದ್ವಿಸದಸ್ಯ ಪೀಠ ಈ ಪಿಐಎಲ್ನಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಪಿಐಎಲ್ ಸಲ್ಲಿಸಿದ್ದ ಮನೋವೈದ್ಯ ವಿನೋದ್ ಕುಲಕರ್ಣಿ ಎಂಬುವವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ, ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಬೇಕೆಂದು ಸೂಚಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿತ್ತು ಸಂವಿಧಾನ, ಸೋಮರಸ..!
ಹಿಂದೂ ಪುರಾಣಗಳಲ್ಲಿ ಕೂಡಾ ಮದ್ಯಸೇವನೆ ರೂಢಿಯಲ್ಲಿತ್ತು. ಪುರಾಣಗಳ ಸೋಮರಸ ಈಗಿನ ಮದ್ಯ ಎರಡೂ ಒಂದೇ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಮದ್ಯ ಸೇವಿಸದಂತೆ ತಡೆಯುವುದು ಸಂವಿಧಾನ 21ನೇ ವಿಧಿಯ ಉಲ್ಲಂಘನೆಯಾಗಿದೆ. ಮಿತವಾಗಿ, ಸಮಾಜ ಒಪ್ಪುವ ರೀತಿ ಮದ್ಯ ಸೇವಿಸುವುದು ಪ್ರತಿಷ್ಠೆಯನ್ನು ಸೂಚಿಸುತ್ತದೆ. ಇದ್ದಕ್ಕಿದ್ದಂತೆ ಮದ್ಯಸೇವನೆ ತಡೆಯುವುದು ತುಂಬಾ ಅಪಾಯಕಾರಿ. ಇದರಿಂದ ಮಾನಸಿಕ ಅಸ್ವಸ್ಥತೆ, ಖಿನ್ನತೆ ಉಂಟಾಗುತ್ತದೆ. ವ್ಯಕ್ತಿಯನ್ನು ಭಾವೋದ್ವೇಗಕ್ಕೆ ತಳ್ಳುತ್ತದೆ ಎಂದು ಮನೋವೈದ್ಯರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.