ಬೆಂಗಳೂರು : ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸೂಕ್ಷ್ಮಾತಿ ಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ 'ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ' ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆಗಳ ಆದೇಶ ಪ್ರತಿ ಕೊಡಲಿದ್ದಾರೆ.
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳ ತನಿಖೆಗೆ ಈ ರೀತಿ ಹೊಸ ಪೊಲೀಸ್ ಹುದ್ದೆಗಳನ್ನು ಸೃಷ್ಟಿ ಮಾಡಲಾಗ್ತಿದೆ. ಯಾವುದಾದರೂ ಒಂದು ಅಪರಾಧ ಕೃತ್ಯ ನಡೆದ ತತಕ್ಷಣ ಘಟನಾ ಸ್ಥಳಕ್ಕೆ ಹೋಗಿ, ಅಲ್ಲಿರುವಂತಹ ಸಾಕ್ಷಾಧಾರಗಳನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಈ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಈವರೆಗೆ ಈ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ, ಇನ್ನುಮುಂದೆ ಮೊದಲ ಹಂತದಲ್ಲಿ ಗಂಭೀರ ಸ್ವರೂಪದ ಅಪರಾಧಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶೇಷ ತರಬೇತಿ ಪಡೆದ ಈ ತಂಡ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಮೊದಲು ಭೇಟಿ ನೀಡಲಿದೆ.
ಆ ಸ್ಥಳದಲ್ಲಿನ ಎಲ್ಲ ಸಾಕ್ಷಾಧಾರಗಳನ್ನು ಸಂರಕ್ಷಣೆ ಮಾಡುವುದು, ಆನಂತರ ಸಾಕ್ಷಾಧಾರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿ ಕೊಡುವುದು, ತನಿಖಾಧಿಕಾರಿಗೆ ಆ ಸಾಕ್ಷಾಧಾರಗಳನ್ನು ಒದಗಿಸುವುದು ಸೇರಿದಂತೆ ಇತರ ಅವಶ್ಯಕ ಕರ್ತವ್ಯಗಳನ್ನು ಮಾಡುತ್ತಾ ಅಪರಾಧಿಗಳನ್ನು ಅತ್ಯಂತ ಶ್ರೀಘ್ರದಲ್ಲಿ ಪತ್ತೆ ಮಾಡಲು ಮೂಲಭೂತವಾಗಿ ಬೇಕಾಗುವ ಎಲ್ಲ ಕೆಲಸಗಳನ್ನು ಈ ಅಧಿಕಾರಿಗಳು ಮಾಡುತ್ತಾರೆ.