ಬೆಂಗಳೂರು: ರಾಜ್ಯ ವಿಧಾನಸಭೆಗೆ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಮೂರೇ ದಿನ ಬಾಕಿ ಇರುವ ಹಿನ್ನೆಲೆ ಅಭ್ಯರ್ಥಿಗಳಿಂದ ಸಾಕಷ್ಟು ಒತ್ತಡ ಕೇಳಿ ಬರುತ್ತಿದೆ. ಇನ್ನಷ್ಟು ವಿಳಂಬವಾದರೆ ಗೆಲ್ಲುವ ಅಭ್ಯರ್ಥಿಗಳು ಪಕ್ಷೇತರವಾಗಿ ಇಲ್ಲವೇ ಬೇರೆ ಪಕ್ಷದಿಂದ ಕಣಕ್ಕಿಳಿಯುವ ಆತಂಕ ಇರುವ ಹಿನ್ನೆಲೆ ಬಾಕಿ ಇರುವ 14ರ ಪೈಕಿ 10 ಕ್ಷೇತ್ರಗಳಿಗೆ ಇಂದೇ ಅಭ್ಯರ್ಥಿ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.
ಮೊದಲ ಪಟ್ಟಿಯಲ್ಲಿ 124, ಎರಡನೇ ಪಟ್ಟಿಯಲ್ಲಿ 42 ಮತ್ತು ಮೂರನೇ ಪಟ್ಟಿಯಲ್ಲಿ 43 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದ ಕಾಂಗ್ರೆಸ್ ನಾಯಕರು ಹಾಲಿ ನಾಲ್ವರು ಶಾಸಕರಿರುವ ಹರಿಹರ (ರಾಮಪ್ಪ), ಪುಲಕೇಶಿ ನಗರ (ಅಖಂಡ ಶ್ರೀನಿವಾಸ್ ಮೂರ್ತಿ), ಶಿಡ್ಲಘಟ್ಟ (ವಿ ಮುನಿಯಪ್ಪ) ಹಾಗೂ ಲಿಂಗಸುಗೂರು (ಡಿಎಸ್ ಹೂಲಗೇರಿ) ಕ್ಷೇತ್ರ ಸೇರಿಸಿಕೊಂಡು 15 ಕ್ಷೇತ್ರಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿತ್ತು. ಈ ಮಧ್ಯೆ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ತ್ಯಜಿಸಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಗೆ ಆಗಮಿಸಿದ ಪಂಜಾಬ್ ಸಿಎಂ ಭಗವಂತ ಮಾನ್ ; ಎಎಪಿ ಅಭ್ಯರ್ಥಿಗಳ ಪರ ಪ್ರಚಾರ
ಇನ್ನೊಂದೆಡೆ ಬಾಕಿ ಉಳಿಸಿಕೊಂಡಿದ್ದ ಹುಬ್ಬಳ್ಳಿ - ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದ ಟಿಕೆಟ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ನೀಡಲಾಗಿದೆ. ಇದರಿಂದ ಇನ್ನು 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದು ಬಾಕಿ ಇದೆ. ಉಳಿದೆಲ್ಲ ಕ್ಷೇತ್ರದಲ್ಲಿ ಘೋಷಿತ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.