ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಿದ್ದಾರೆ. ಸಮಗ್ರ ಶಿಕ್ಷಣ ಕಚೇರಿಯಲ್ಲಿ ಇಂದು ಮಾತನಾಡಿದ ಸಚಿವರು, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದೇವೆ. 1:1 ಆಧಾರದಲ್ಲಿ ಪಟ್ಟಿ ರಿಲೀಸ್ ಮಾಡಲಾಗಿದೆ. ಎಲ್ಲರ ಆರೋಪಕ್ಕೆ ಇವತ್ತು ಉತ್ತರ ನೀಡಿದ್ದೇವೆ. ಅತ್ಯುತ್ತಮವಾಗಿ ಪರೀಕ್ಷೆ ನಡೆಸಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
15 ಸಾವಿರ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಮಾಡಿದ್ದೆವು. 1:1 ಆಧಾರದಲ್ಲಿ 13,363 ಅಭ್ಯರ್ಥಿಗಳು ಪಟ್ಟಿಯಲ್ಲಿ ಇದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಹುದ್ದೆ ಇಟ್ಟಿದ್ದೇವೆ. ಆದರೆ ಅಲ್ಲಿ ಸ್ವಲ್ಪ ಕೊರತೆ ಆಗಿದೆ. 5 ಸಾವಿರ ಹುದ್ದೆ ಪೈಕಿ 4,187 ಪಟ್ಟಿ ಬಿಡುಗಡೆ ಆಗಿದೆ. ಉಳಿದ ಭಾಗದಲ್ಲಿ 9,176 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
1,768 ಇಂಗ್ಲಿಷ್ ಅಭ್ಯರ್ಥಿಗಳು, ಗಣಿತ – 5,450, ಸಮಾಜ ವಿಜ್ಞಾನ - 4,521, ಜೀವ ವಿಜ್ಞಾನ - 1,624 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಒಟ್ಟು 15 ಸಾವಿರ ಹುದ್ದೆಗಳಲ್ಲಿ 13,363 ಹುದ್ದೆಗೆ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.