ಬೆಂಗಳೂರು:ಅಕ್ರಮ ಸಕ್ರಮ ಯೋಜನೆ ಜಾರಿ ಮೂಲಕ ರಾಜಸ್ವ ಸಂಗ್ರಹಕ್ಕೆ ನಿರ್ಧರಿಸಲಾಗಿದ್ದು, ಬೇರೆ ರಾಜ್ಯಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಅಧ್ಯಯನ ವರದಿಯನ್ವಯ ಈ ಸಂಬಂಧ ಇನ್ನೊಂದು ವಾರದಲ್ಲಿ ನಗರಾಭಿವೃದ್ಧಿ ಇಲಾಖೆ ಮಾರ್ಗಸೂಚಿ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅಕ್ರಮ ಸಕ್ರಮ ಕುರಿತಂತೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂದಾಯ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅಕ್ರಮ ಸಕ್ರಮದ ಕುರಿತು ಚರ್ಚೆ ನಡೆಸಲಾಯಿತು.
ಈ ಹಿಂದೆ ಅಕ್ರಮ ಸಕ್ರಮದ ಕುರಿತಂತೆ ಸಂಪುಟ ಉಪ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ವರದಿಯ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಇಂದು ಅಕ್ರಮ ಸಕ್ರಮದ ಬಗ್ಗೆ ಸಭೆ ನಡೆಸಲಾಯಿತು. ಅನಧಿಕೃತ ಕಟ್ಟಡಗಳು, ಬಡಾವಣೆಗಳಿಗೆ ಲೈಟ್, ನೀರು ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಸರ್ಕಾರ ನೀಡಿದೆ. ಆದರೆ ಇದರಿಂದ ಸರ್ಕಾರಕ್ಕೆ ಮಾತ್ರ ಯಾವುದೇ ತೆರಿಗೆ ಬರುತ್ತಿಲ್ಲ. ಅನಧಿಕೃತ ಕಟ್ಟಡಗಳನ್ನ ಸಕ್ರಮ ಮಾಡುವುದರ ಜೊತೆಗೆ ರಾಜಸ್ವ ಸಂಗ್ರಹದ ಗುರಿ ಇದೆ.
ಹಳೇ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ 2.93 ಲಕ್ಷ ಅನಧಿಕೃತ ಕಟ್ಟಡಗಳಿವೆ. ರಾಜ್ಯದಲ್ಲಿ 35 ಲಕ್ಷ ಅನಧಿಕೃತ ಕಟ್ಟಡಗಳಿದ್ದವು. ಈಗ ಡಬಲ್ ಆಗಿರಬಹುದು. ನಿರ್ಮಾಣ ನಿಯಮ ಉಲ್ಲಂಘನೆ ಅಡಿಯಲ್ಲಿ ಶೇ. 25ರಷ್ಟು ದಂಡ ವಿಧಿಸಲು ಅವಕಾಶ ಇದೆ. ಬೇರೆ ರಾಜ್ಯಗಳ ಕ್ರಮಗಳನ್ನ ಅಧ್ಯಯನ ನಡೆಸಿ, ಸಕ್ರಮಕ್ಕೆ ಮಾರ್ಗಸೂಚಿಗಳನ್ನ ಪುನರಚಿಸಲು ಸೂಚಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಒಂದು ವಾರದೊಳಗೆ ಹೊಸ ಮಾರ್ಗಸೂಚಿ ಹೊರಡಿಸುತ್ತದೆ ಎಂದು ಮಾಹಿತಿ ನೀಡಿದರು.