ಬೆಂಗಳೂರು: ವಿಶ್ವದೆಲ್ಲೆಡೆ ಭೀತಿ ಸೃಷ್ಟಿಸಿರುವ ಕೊರೊನಾ ವೈರಸ್ ವಿಷಯ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿತು.
ಇಂದು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ಇಟಲಿಯಲ್ಲಿ 400ಕ್ಕೂ ಹೆಚ್ಚು ಕನ್ನಡಿಗರು ಸೇರಿದಂತೆ ಸಾವಿರಾರು ಭಾರತೀಯರು ಇದ್ದಾರೆ. ಅದರಲ್ಲಿ ರಾಜ್ಯದ 150 ವಿದ್ಯಾರ್ಥಿಗಳು ಇದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಮೂಲಕ ಮಾಡಬೇಕೆಂದು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಕೊರೊನಾ ಬಗ್ಗೆ ಚರ್ಚೆ ಭಾರತಕ್ಕೆ ಆಗಮಿಸಲು ಕೊರೊನಾ ನೆಗೆಟಿವ್ ಇರುವ ಪ್ರಮಾಣಪತ್ರ ಇಲ್ಲದಿದ್ದರೆ ಏರ್ ಇಂಡಿಯಾ ವಿಮಾನ ಹತ್ತಿಸುತ್ತಿಲ್ಲ. ಅವರಿಗೆ ಆಹಾರ ಸಮಸ್ಯೆ ಇದ್ದು, ಅವರನ್ನು ಕರೆತರಲು ವಿಶೇಷ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ಕಲಬುರಗಿಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರ ಪ್ರಾರಂಭಿಸಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಮಿಲಾನ್ ವಿಮಾನ ನಿಲ್ದಾಣದಿಂದ ಕನ್ನಡಿಗರು ಹಾಗೂ ಭಾರತೀಯರನ್ನು ಕರೆತರಲಾಗಿದೆ. ರೋಮ್‍ನಲ್ಲಿರುವವರ ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತಿದ್ದು, ವೈದ್ಯಕೀಯ ವರದಿ ಆಧರಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ. ಕೇಂದ್ರ ವಿದೇಶಾಂಗ ಇಲಾಖೆ ಈ ಬಗ್ಗೆ ಸೂಕ್ತ ಗಮನ ಹರಿಸುತ್ತಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಇನ್ನು ಇದಕ್ಕೆ ತೃಪ್ತರಾಗದ ಕಾಂಗ್ರೆಸ್-ಜೆಡಿಎಸ್‍ನ ಹಲವು ಸದಸ್ಯರು ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಈಗ ಸದನದಲ್ಲಿ ಇಲ್ಲ. ನಾಳೆಗೆ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದಾಗ ಈ ವಿಚಾರಕ್ಕೆ ತೆರೆ ಬಿತ್ತು.