ಬೆಂಗಳೂರು :ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭಾಗವಹಿಸಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ಬಿಬಿಎಂಪಿಯನ್ನು ಕಾಂಗ್ರೆಸ್ ತನ್ನ ಕಚೇರಿಯನ್ನಾಗಿ ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರವನ್ನು ಎಟಿಎಂ ಮಾಡಿಕೊಳ್ಳಲು ಹೊರಟಂತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು ನಿಯಮಾವಳಿ ಉಲ್ಲಂಘಿಸಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಇಂದು ರಾಜಭವನಕ್ಕೆ ತೆರಳಿದ ಶಾಸಕರಾದ ಆರ್.ಅಶೋಕ್, ಸುರೇಶ್ ಕುಮಾರ್, ರಘು, ಸಿ.ಕೆ.ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಎಂ. ಕೃಷ್ಣಪ್ಪ, ಸಂಸದ ಪಿ.ಸಿ. ಮೋಹನ್ ಅವರಿದ್ದ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಯಿತು. ಈ ಸಂದರ್ಭದಲ್ಲಿ ಸುರ್ಜೇವಾಲ ಜೊತೆ ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು, ಶಾಸಕರ ವಿರುದ್ಧ ದೂರು ಸಲ್ಲಿಸಿ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, "ಮಹಾನಗರ ಪಾಲಿಕೆ ಕಚೇರಿಯನ್ನು ಕಾಂಗ್ರೆಸ್ ಕಚೇರಿ ಮಾಡಲು ಹೊರಟಿದ್ದಾರೆ. ಡಿ.ಕೆ. ಶಿವಕುಮಾರ್, ಸಚಿವ ಕೆ.ಜೆ. ಜಾರ್ಜ್ ಎಲ್ಲರೂ ಪಾಲಿಕೆಯನ್ನು ಕಾಂಗ್ರೆಸ್ ಕಚೇರಿ ಮಾಡಲು ಹೊರಟಿದ್ದಾರೆ. ನಮ್ಮ ರಾಜ್ಯಸಭಾ, ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದರಿದ್ದಾರೆ. ಅವರನ್ನು ಕರೆದಿಲ್ಲ. ಇದಕ್ಕೆ ಬದಲಾಗಿ ರಾಜ್ಯದ ಯಾವ ಕ್ಷೇತ್ರದ ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ರಣದೀಪ್ ಸುರ್ಜೇವಾಲರನ್ನು ಕರೆದು ಸಭೆ ಮಾಡಿದ್ದಾರೆ. ಸಭೆಯಲ್ಲಿ ವಾರ್ಡ್ ವಿಂಗಡಣೆ, ಡಿಲಿಮಿಟೇಷನ್ ಚರ್ಚೆ ಮಾಡಿದ್ದಾರೆ".
"ಈ ಸಭೆಗೆ ಸಚಿವರ ಹೊರತು ಯಾರನ್ನೂ ಕರೆಯುವಂತಿಲ್ಲ. ಹಾಗಿದ್ದರೆ ಅಧಿಕಾರಿಗಳು ಯಾಕೆ ಬೇಕು? ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಹೇಳಿದಂತೆ ಬೆಂಗಳೂರನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್ನವರು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಕದ ಚೇರಲ್ಲಿ ಕೂತಿದ್ದರೆ ಕ್ಷಮಿಸಬಹುದಿತ್ತು. ಆದರೆ ಬಿಬಿಎಂಪಿಯ ಪ್ರಮುಖ ಚೇರಲ್ಲಿ ಕೂತಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿದೆ. ಹಾಗಾಗಿ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಎಲ್ಲ ದಾಖಲೆ, ಮಾಧ್ಯಮದಲ್ಲಿ ಬಂದ ವರದಿ ತಮ್ಮ ಬಳಿ ಇರುವುದಾಗಿ ರಾಜ್ಯಪಾಲು ಹೇಳಿದ್ದಾರೆ. ಅಧಿಕಾರಿಗಳನ್ನೂ ಕೂಡ ತನಿಖೆ ಮಾಡಬೇಕು ಅಂತ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ" ಎಂದು ತಿಳಿಸಿದರು.